ಸುದ್ದಿ ಕನ್ನಡ ವಾರ್ತೆ

ಕಾರವಾರ : ತಾಲೂಕಿನ ಖಾಸಗಿ
ಶಾಲೆಯೊಂದರಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಶಾಲೆ ಬಿಟ್ಟ ಬಳಿಕ ಮನೆಗೆ ಮರಳದೇ ನಾಪತ್ತೆಯಾಗಿ ಆತಂಕ ಮೂಡಿಸಿದ ಘಟನೆ ನಡೆದಿದೆ.

ಶನಿವಾರ ಮಧ್ಯಾಹ್ನ ಶಾಲೆ ಮುಗಿದ ನಂತರ ಇಬ್ಬರು ವಿದ್ಯಾರ್ಥಿಗಳು ಸೈಕಲ್ ಮೂಲಕ ಶಿರವಾಡದ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದರು. ರೈಲು ನಿಲ್ದಾಣದ ದಾರಿ ಸರಿಯಾಗಿ ತಿಳಿಯದೇ, ಮಾರ್ಗಮಧ್ಯೆ ಸಾರ್ವಜನಿಕರನ್ನು ಪ್ರಶ್ನಿಸುತ್ತಾ ಸಾಗಿದ್ದಾರೆಎನ್ನಲಾಗಿದೆ. ಈ ವೇಳೆ, ಅದೇ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಇವರನ್ನು ದಾರಿ ಕೇಳುತ್ತಿರುವುದನ್ನು ಗಮನಿಸಿ, ತಕ್ಷಣವೇ ವಿಷಯವನ್ನು ವಿದ್ಯಾರ್ಥಿಗಳ ಪಾಲಕರಿಗೆ ತಿಳಿಸಿದ್ದಾನೆ.

ಮಕ್ಕಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಪಾಲಕರು ಹಾಗೂ ಶಿಕ್ಷಕರು ಶಿರವಾಡ ರೈಲ್ವೆ ನಿಲ್ದಾಣಕ್ಕೆ ಧಾವಿಸಿ ಹುಡುಕಾಟ ನಡೆಸಿದರು. ನಿಲ್ದಾಣದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಇಬ್ಬರು ವಿದ್ಯಾರ್ಥಿಗಳು ದೆಹಲಿ ಕಡೆಗೆ ತೆರಳುವ ರೈಲನ್ನುಹತ್ತಿರುವುದು ದೃಢಪಟ್ಟಿತು. ಕೂಡಲೇ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ ಅಲರ್ಟ್‌ ಘೋಷಿಸಲಾಯಿತು.

ಸೂಚನೆಯ ಮೇರೆಗೆ ಕಾರ್ಯಾಚರಣೆ ನಡೆಸಿದ ಚಲಿಸುತ್ತಿದ ರೈಲನ್ನು ತಡೆದು ಮಕ್ಕಳನ್ನು ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ ಸುರಕ್ಷಿತವಾಗಿ ಪತ್ತೆಹಚ್ಚಿದ್ದಾರೆ. ಬಳಿಕ ಮಕ್ಕಳ ಆರೋಗ್ಯ ಪರಿಶೀಲಿಸಿ, ಸಂಬಂಧಿಸಿದ ಅಧಿಕಾರಿಗಳು ಪಾಲಕರಿಗೆ ಮಾಹಿತಿ ನೀಡಿದ್ದರಿಂದ ನಿಟ್ಟುಸಿರು ಬಿಡುವಂತಾಯಿತು.ಘಟನೆ ಕೆಲಕಾಲ ಕಾರವಾರದಲ್ಲಿ ಆತಂಕ ಸೃಷ್ಟಿಸಿದರೂ, ಮತ್ತೊಬ್ಬ ವಿದ್ಯಾರ್ಥಿಯ ಸಮಯೋಚಿತ ಎಚ್ಚರಿಕೆ ಮತ್ತು ರೈಲ್ವೆ ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.