ಸುದ್ದಿ ಕನ್ನಡ ವಾರ್ತೆ
ಅಂಕೋಲಾ: ಗ್ಯಾಸ್ ಸಿಲಿಂಡರ್ ರಿಪೇರಿ ಮಾಡಿದ ಕೆಲ ಹೊತ್ತಿನಲ್ಲಿ ಸ್ಪೋಟಗೊಂಡ ಘಟನೆ ತಾಲೂಕಿನ ಕೇಣಿಯ ಮನೆಯೊಂದರಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಆರು ಜನರಿಗೆ ಗಾಯಗಳಾಗಿದ್ದು, ಈರ್ವರ ಪರಿಸ್ಥಿತಿ ಗಂಭೀರವಾಗಿದೆ. ಕೇಣಿಯ ಗೌರೀಶ ನಾಯಕ ಎಂಬುವವರ ಮನೆಯ ಸೀಲೆಂಡರ್ ಸೋರಿಕೆ ಆಗಿದ್ದರಿಂದ ಸಿಲೆಂಡರನ್ನು ಸರಿಪಡಿಸಲು ಶ್ರವಣ ಬಂಟ (55) ಎನ್ನುವವರಿಗೆ ಕರೆದಿದ್ದರು. ಶ್ರವಣ ಬಂಟ ಸಿಲೆಂಡರ್ ದುರಸ್ತಿ ಪಡಿಸಿ ಸರಿ ಇದೆ ಎಂದು ಖಚಿತ ಪಡಿಸಿ ಹೊರಡುವಷ್ಟರಲ್ಲಿ ಬಾಡಿಗೆ ಮನೆಯಲ್ಲಿರುವ ಸುದರ್ಶನ ಲೋಕಪ್ಪ ನಾಯ್ಕ (48) ಎನ್ನುವವರು ಬೆಂಕಿ ಕಡ್ಡಿಯನ್ನು ಅಡುಗೆ ಮಾಡುವ ಗ್ಯಾಸ್ ಒಲೆಯ ಹತ್ತಿರ ಗೀರಿದ್ದು ಏಕಾಏಕಿ ಬೆಂಕಿ ಹತ್ತಿಕೊಂಡಿದೆ.
ಈ ಸಂದರ್ಭದಲ್ಲಿ ಮನೆಯೊಳಗಿದ್ದ ಸುದರ್ಶನ ಲೋಕಪ್ಪ ನಾಯ್ಕ ಅವರ ಪತ್ನಿ ರೂಪಾಳಿಗೂ ಸಹ ಚಿಕ್ಕಪುಟ್ಟ ಸುಟ್ಟ ಗಾಯಗಳಾಗಿವೆ. ಜೊತೆಯಲ್ಲಿ ಸಿಲೆಂಡರ್ ದುರಸ್ತಿ ಮಾಡಲು ಬಂದ ಶ್ರವಣ ಬಂಟ ಎನ್ನುವವರಿಗೂ ತೀವ್ರ ತರಹದ ಗಾಯಗಳಾಗಿವೆ. ಸುದರ್ಶನ ಅವರ ಮಗ ಶಿವಪ್ರಸಾದ ನಾಯ್ಕ (12) ಇವರಿಗೂ ಅಲ್ಪಸ್ವಲ್ಪ ಸುಟ್ಟ ಗಾಯಗಳಾಗಿದೆ. ಮನೆಯ ಮಾಲಕ ಗೌರೀಶ ನಾಯಕರವರ ಮೊಮ್ಮಗ ಕೃಷ್ಣ ದೀಲಿಪ ನಾಯಕ (4) ಈತನಿಗೂ ಸುಟ್ಟಗಾಯಗಳಾಗಿವೆ. ಜೊತೆಯಲ್ಲಿ ತನ್ನ ಮೊಮ್ಮಗನನ್ನು ಕರೆತರಲು ಸಿಲೆಂಡರ್ ರಿಪೇರಿ ಮಾಡುವಲ್ಲಿ ತೆರಳಿದ ಗಿರಿಜಾ ಗೌರೀಶ ನಾಯಕ ಎನ್ನುವವರಿಗೂ ಗಾಯಗಳಾಗಿದೆ. ಗಾಯಾಳುಗಳನ್ನಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಅಂಕೋಲಾ ಪೊಲೀಸರು,ಅಗ್ನಿಶಾಮಕ ದಳದ ಸಿಬ್ಬಂದಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಂಕೋಲಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
