ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿಯ ಕ್ರೈಸ್ತ ಸಮುದಾಯದ ಬಾಂಧವರು ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ದಿನಾಂಕ:24-12-2025 ರ ಮಧ್ಯ ರಾತ್ರಿಯ ವೇಳೆ ನಂದಿಗದ್ದೆಯಲ್ಲಿರುವ ದೀಪಾಲಂಕಾರದಿಂದ ಅಲಂಕೃತ ಚರ್ಚ್ ನಲ್ಲಿ ಧರ್ಮಗುರುಗಳಾದ ಫಾದರ್ ರೆಮೆಂದ ಫರ್ನಾಂಡಿಸ್ ಅವರ ದಿವ್ಯ ಸನ್ನಿಧಿಯಲ್ಲಿ ಏಸು ಕ್ರಿಸ್ತನ್ ವಿಶೇಷ ಪೂಜೆ,ಪ್ರಾರ್ಥನೆ ನಡೆಯಿತು.ಧರ್ಮಗುರುಗಳು ಕ್ರಿಸ್ಮಸ್ ಹಬ್ಬದ ಸಂದೇಶವನ್ನು ಹೇಳಿದರು.
ಕ್ರೈಸ್ತ ಸಮುದಾಯದ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ದಿನಾಂಕ:25-12-2025 ರಂದು ಬೆಳಿಗ್ಗೆ ಪ್ರಾರ್ಥನೆ ನಡೆಯಿತು. ಮಧ್ಯಾಹ್ನದ ವೇಳೆ ಹಬ್ಬದ ನಿಮಿತ್ತ ವಿವಿಧ ತಿಂಡಿತಿನಿಸುಗಳು,ವಿಶೇಷ ಭೋಜನವನ್ನು ನೆರೆಹೊರೆಯವರೊಂದಿಗೆ ಪರಸ್ಪರ ಸ್ವೀಕರಿಸಿದರು. ಸಂಜೆಯ ವೇಳೆ ಕ್ರಿಸ್ಮಸ್ ಹಬ್ಬದ ನಿಮಿತ್ತ ಮನರಂಜನೆಗಾಗಿ ಹಿರಿಯರ ಮಾರ್ಗದರ್ಶನದಲ್ಲಿ ಮಕ್ಕಳಿಂದ ನೃತ್ಯ,ಜೊಕ್ಸ್, ಹಿರಿಯರಿಂದ ಜೊಕ್ಸ್, ಹಿಂದಿ, ಕನ್ನಡ,ಕೊಂಕಣಿ ಹಾಡುಗಳ ಗಾಯನ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡವು.
ಈ ಸಂದರ್ಭದಲ್ಲಿ ಧರ್ಮಗುರುಗಳಾದ ಫಾದರ್ ರೆಮೆಂದ ಫರ್ನಾಂಡಿಸ್ ರವರು ವಿಶ್ವಕ್ಕೆ ಶಾಂತಿ ಮತ್ತು ಸತ್ಯದ ಸಂದೇಶ ಸಾರಿದ ಏಸು ಕ್ರಿಸ್ತನ ಜನ್ಮದಿನದ ಹಬ್ಬದ ನಿಮಿತ್ತ ಎಲ್ಲರಿಗೂ ಮತ್ತೊಮ್ಮೆ ಶುಭವನ್ನು ಕೋರಿದರು. ಅದೇ ರೀತಿಯಾಗಿ ಚರ್ಚ್ ನ ಆವರಣದಲ್ಲಿರುವ ಏಸು ಕ್ರಿಸ್ತನ್ ಜನ್ಮಸಿದ ಸ್ಥಳವಾದ ಗೋದಲಿಯ ಅಲಂಕೃತ ದೀಪಾಲಂಕಾರ,ಜೊತೆಯಲ್ಲಿ ಕ್ರಿಸ್ಮಸ್ ಟ್ರೀಯ ದೀಪಾಲಂಕಾರ ವಿಶೇಷ ಮೆರಗನ್ನು ನೀಡುತ್ತೀವೆ. ಹಿರಿಯರು,ಯುವಕರು, ಯುವತಿಯರು, ಪುರುಷರು, ಮಹಿಳೆಯರು, ಮಕ್ಕಳು ಎಲ್ಲರೂ ಹಬ್ಬದ ಖುಷಿಯಲ್ಲಿ ಪಾಲ್ಗೊಂಡಿದ್ದರು. ಅದಲ್ಲದೇ ತಮ್ಮ ತಮ್ಮ ವಾಡಾದಲ್ಲಿಯೂ ಗೋದಲಿಗಳನ್ನು ನಿರ್ಮಾಣ ಮಾಡಿ ಅದಕ್ಕೆ ದೀಪಾಲಂಕಾರಗಳಿಂದ ಶೃಂಗರಿಸಿ, ಮನೆಗಳಿಗೂ ದೀಪಾಲಂಕಾರ, ನಕ್ಷತ್ರ ಬುಟ್ಟಿಯನ್ನು ಮನೆಯ ಮುಂದೆ ತೂಗು ಹಾಕಲಾಗಿದೆ.
ತಾಲೂಕಿನ ಜೋಯಿಡಾ ಕುಂಬಾರವಾಡಾ,ರಾಮನಗರ ಭಾಗದ ಕ್ರೈಸ್ತ ಸಮುದಾಯದ ಬಾಂಧವರು ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ವಿಶೇಷ ಪ್ರಾರ್ಥನೆ, ಪರಸ್ಪರ ಶುಭಾಶಯ ವಿನಿಮಯ,ಸಂಜೆಯ ವೇಳೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಸ್ವಾಗತಿಸಿ ಆಚರಿಸಿದರು.ಒಟ್ಟಿನಲ್ಲಿ ಕ್ರಿಸ್ಮಸ್ ಹಬ್ಬದ ಸಡಗರ ಸಂಭ್ರಮದ ವಾತಾವರಣ ಕಂಡು ಬಂದಿತು.
ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಗುಂದದ ಪಶು ಚಿಕಿತ್ಸಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಜುಜೆ ಫರಾಶಿಕ್ ಫರ್ನಾಂಡಿಸ್ ಅವರ ಮನೆಯ ಆವರಣದಲ್ಲಿ ನಿರ್ಮಾಣ ಮಾಡಿರುವ ಅಲಂಕೃತ ಗೋದಲಿಯ ಚಿತ್ರ.
