ಸುದ್ದಿ ಕನ್ನಡ ವಾರ್ತೆ

ಜೊಯಿಡಾ: ಪ್ರತಿಭಾ ಕಾರಂಜಿ,ಕ್ರೀಡೆಗಳಿಂದ ವಂಚಿತರಾಗಿದ್ದ ವಿದ್ಯಾರ್ಥಿಗಳಿಗೆ ಇಲ್ಲಿನ ಗಡಿಭಾಗದ ಶಿಕ್ಷಕರು ಗಡಿಯಲ್ಲೊಂದು ಕಲಿಕಾ ಹಬ್ಬ ಕಾರ್ಯಕ್ರಮದ ಮುಖೇನ ಒಂದು ಸುಂದರ ವೇದಿಕೆಯನ್ನು ಕಲ್ಪಿಸುತ್ತಿರುವುದು ಒಳ್ಳೆಯ ಪ್ರಯತ್ನ ಎಂದು ಸಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ D.R ನಾಯ್ಕ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕಿನ ಬಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಂಡೇಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಡಿಗ್ಗಿ ಭಾಗದ ಸುಮಾರು 11 ಶಾಲೆಗಳ ಸಹಯೋಗದಲ್ಲಿ ನಡೆದ ಗಡಿಯಲ್ಲೊಂದು ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಈ ಹಿಂದೆ ತಾವು ಜೊಯಿಡಾ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸಿದ್ದನ್ನು ನೆನೆದ ಅವರು ಗಡಿ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ಕಾರ್ಯಕ್ರಮಗಳಿಗೆ ಯಾವತ್ತೂ ಬೆನ್ನುಲುಬಾಗಿ ನಿಲ್ಲುವ ಭರವಸೆ ನೀಡಿದರು.
ಡಯೆಟ್ ಪ್ರಾಚಾರ್ಯ ಎಂ ಎಸ್ ಹೆಗಡೆ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು,ಇಂತಹ ಸುಂದರ ಪರಿಸರದಲ್ಲಿ ಜೀವನ ರೂಪಿಸಿಕೊಂಡು ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳುತ್ತಿರುವ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳು ಅತ್ಯಂತ ಅವಶ್ಯಕ ಎಂದರು.
ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಬೊಂಡೇಲಿಯ ಪ್ರಗತಿಪರ ರೈತರನ್ನು, ಶಾಲೆಯಲ್ಲಿ ಕಲಿತ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಹಿರಿಯ ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕ್ಯಾಸಲ್ ರಾಕ್ ಸಿಆರ್ ಪಿ ಭಾಸ್ಕರ್ ಗಾಂವ್ಕರ್ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೊಂಡೇಲಿ, ಡಿಗ್ಗಿ,ದುದಮಳಾ,ಕರಂಜೆ,ಸಿಸೈ,ಮಾಯರೆ,ಅಸುಳ್ಳೆ,ಸೋಲಿಯೆ,ಭಾಮಣೆ,ಪಾತಾಗುಡಿ,ಶಿರವಳೆ ಶಾಲೆಗಳ ವಿದ್ಯಾರ್ಥಿಗಳಿಂದ ಗಿರಿಜನರ ಜೀವನ ಕುರಿತು ಭಾಷಣ, ಚಿತ್ರಕಲೆ, ಮಣ್ಣಿನ ಮಾದರಿ, ಛದ್ಮವೇಷ,ಕೋಲಾಟ ಹಾಗೂ ಜಾನಪದ ನೃತ್ಯಗಳ ಪ್ರದರ್ಶನವಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಷೀರ್ ಅಹ್ಮದ್ ಶೇಖ್, ವ್ಯವಸ್ಥಾಪಕ ಸಂತೋಷ ಸಾಳುಂಕೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ,ಬಜಾರಕುಣಂಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ ಹರಿಜನ, ಸದಸ್ಯರಾದ ದೇವಿದಾಸ ಮೀರಾಶಿ, ಸುನೀತಾ ಮೀರಾಶಿ, ಶಿಕ್ಷಣ ಸಂಯೋಜಕ ಪರಮೇಶ್ವರ್ ಹರಿಕಂತ್ರ ಮುಂತಾದವರು ಉಪಸ್ಥಿತರಿದ್ದರು.