ಸುದ್ದಿ ಕನ್ನಡ ವಾರ್ತೆ

ಸಿದ್ದಾಪುರ: ತಾಲೂಕಿನ ಬಿಳಗಿ ಪಂಚಾಯತ್ ಹಾಗೂ ಕ್ಯಾದಗಿ ಅರಣ್ಯ ವಲಯಕ್ಕೆ ಒಳಪಡುವ ಗೋಳಿಕೈ ಗ್ರಾಮದ ಜಯರಾಮ ಹೆಗಡೆ ಎಂಬುವವರು ತಲೆಮಾರುಗಳಿಂದ ಸಾಗುವಳಿ ಮಾಡುತ್ತಿದ್ದ ಅತಿಕ್ರಮಣ ಜಾಗದ ಸುಮಾರು 120 ಕ್ಕೂ ಹೆಚ್ಚು ಅಡಿಕೆ ಮರವನ್ನು ಅರಣ್ಯ ಇಲಾಖೆಯವರು ಮಂಗಳವಾರ ಕಡಿದ ಸ್ಥಳಕ್ಕೆ ಬುಧವಾರ ಬಿಜೆಪಿ ಮುಖಂಡರು ಉತ್ತರ ಕನ್ನಡ ಜಿಲ್ಲಾ ರೈತ ಮೋರ್ಚಾದ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಭೇಟಿ ನೀಡಿ ಘಟನೆ ಖಂಡಿಸಿ ರೈತರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ,ಅರಣ್ಯ ಉಳಿಸುವವರೇ ಈ ರೀತಿಯ ದೌರ್ಜನ್ಯ ನಡೆಸಿದರೆ ರೈತರು ಎಲ್ಲಿಗೆ ಹೋಗಬೇಕು ? ಅರಣ್ಯ ಇಲಾಖೆಯವರಿಗೆ ಮರಗಳನ್ನು ಕಡಿಯುವ ಅಧಿಕಾರವನ್ನು ನೀಡಿದವರಾರು ? ರೈತರ ದಿನಾಚರಣೆಯ ದಿನವೇ ಈ ರೀತಿಯ ಕೃತ್ಯ ಮಾಡಿರುವುದು ಎಷ್ಟು ಮಟ್ಟಿಗೆ ಸರಿ ? ಈ ದುರುದ್ದೇಶದ ಹಿಂದೆ ಯಾರ ಕೈವಾಡವಿದೆ ಎಂಬುದು ತಿಳಿದುಬರುತ್ತಿಲ್ಲ. ನಮ್ಮ ಜಿಲ್ಲೆಯ ರೈತರನ್ನು ಶಾಂತ ಸ್ವಭಾವದವರೆಂದು ಕಡೆಗಣಿಸಬೇಡಿ, ರೈತರನ್ನು ಒಕ್ಕಲೆಬ್ಬಿಸಬೇಡಿ ಉಗ್ರ ಹೋರಾಟಕ್ಕೂ ನಮ್ಮ ರೈತರು ಹಿಂಜರಿಯುವುದಿಲ್ಲ ಅದರಿಂದ ಆಗುವ ಪರಿಣಾಮವನ್ನು ನಿಮ್ಮ ಇಲಾಖೆಯು ಸಹಿಸಲು ಸಾಧ್ಯವಿಲ್ಲ ಹಾಗೂ ಸಂಪೂರ್ಣ ಹೊಣೆಯನ್ನು ಕೂಡ ನೀವೇ ಭರಿಸಬೇಕಾಗುತ್ತದೆ. ಮರ ಕಡಿಯುವ ಪ್ರಕ್ರಿಯೆಯಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ 1980 ರ ಪೂರ್ವದಿಂದ ಸಾಗುವಳಿ ಮಾಡಿಕೊಂಡು ಬಂದಿದ್ದ ತೋಟ ಇಂದು ನಾಶವಾಗಿದೆ. ಅಲ್ಲಲ್ಲಿ ಬೇರೆ ಬೇರೆ ಜಾತಿಯ ಮರಗಳನ್ನು ಬಿಟ್ಟು ಅಡಿಕೆ ಮರಗಳನ್ನು ಸಂಪೂರ್ಣ ಕಿತ್ತೆಸೆಯಲಾಗಿದೆ ರೈತರಿಗೆ ಮಾಡಿದ ಅನ್ಯಾಯ ಎಂದರು. ಸ್ಥಳೀಯ ಶಾಸಕರು ಅರಣ್ಯ ಇಲಾಖೆ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಬೇಕು ಎಂದು ಆಗ್ರಹ ಮಾಡಿದರು.

ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ.ಕೆ ತಿಮ್ಮಪ್ಪ ಮಾತನಾಡಿ, ಅರಣ್ಯ ಇಲಾಖೆಯ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸುವುದನ್ನೇ ತಮ್ಮ ಮುಖ್ಯ ಗುರಿಯನ್ನಾಗಿಸಿಕೊಂಡಿದ್ದಾರೆ. ತಾಲೂಕಿನ ರೈತರು ನೆಮ್ಮದಿಯ ಜೀವನ ನಡೆಸದಂತೆ ಯಾವ ಕ್ಷಣದಲ್ಲಿ ಇಲಾಖೆಯವರು ಬಂದು ಮರ ಕಡಿದುಬಿಡುತ್ತಾರೋ ಎಂಬ ಆತಂಕದಿಂದ ದಿನವನ್ನು ದೂಡುತ್ತಿದ್ದಾರೆ . ಬೇರೆ ದೇಶಗಳಿಂದ ವಲಸೆ ಬಂದವರಿಗೆ , ನಿರಾಶ್ರಿತರಿಗೆ ಸರ್ಕಾರ ಸಾವಿರಾರು ಎಕರೆ ಭೂಮಿಯನ್ನು ನೀಡಲು ಮುಂದಾಗಿದೆ ಹೊರಯಿಲ್ಲಿಯ ಹುಟ್ಟಿರುವ ದೇಶವಸಿಗಳಾದ ರೈತರ ನೆರವಿಗೆ ಬಾರದಿರುವುದು ಶೋಚನೀಯ. ಈ ರೀತಿಯ ದೌರ್ಜನ್ಯವು ಬಹಳ ದಿನ ನಡೆಯುವುದಿಲ್ಲ . ರೈತರ ಪರವಾಗಿ ಯಾವುದೇ ರೀತಿಯ ಹೋರಾಟಕ್ಕೂ ನಾವು ಸಿದ್ಧ ಎಂದು ಹೇಳಿದರು.

ಕ್ಯಾದಗಿ ವಲಯ ಅರಣ್ಯ ಇಲಾಖೆಯವರೊಂದಿಗೆ ತಿಮ್ಮಪ್ಪ ಎಂ.ಕೆ. ದೂರವಾಣಿಯಲ್ಲಿ ಮಾತನಾಡಿದರು. ಕಾನೂನಿನ ಪ್ರಕಾರ ಹಾಗೂ ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಲು ಮೊದಲೇ ಸೂಚಿಸಿ ನೋಟಿಸ್ ಕೂಡ ನೀಡಲಾಗಿತ್ತು ಎಂದು ಅರಣ್ಯ ಇಲಾಖೆಯವರು ಸಮಜಾಯಿಸಿ ನೀಡುತ್ತಿದ್ದಾರೆ ಎಂದು ತಿಮ್ಮಪ್ಪ ತಿಳಿಸಿದರು.
ಬಿಜೆಪಿ ಪ್ರಮುಖರಾದ ರಾಘವೇಂದ್ರ ಶಾಸ್ತ್ರಿ , ಬಿಜೆಪಿ ಮಂಡಲ ಪ್ರದಾನಕಾರ್ಯದರ್ಶಿ ತೋಟಪ್ಪ ನಾಯ್ಕ,ಮಾತನಾಡಿ ಆಕ್ರೋಶ ಹೊರ ಹಾಕಿದರು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಕೃಷ್ಣಮೂರ್ತಿ ನಾಯ್ಕ ಐಸೂರು,ಆದರ್ಶ ಪೈಅಣ್ಣಪ್ಪ ನಾಯ್ಕ ಕಡಕೇರಿ,ವಿಜಯ ಹೆಗಡೆ,ರೈತಸಂಘದ ಜಿಲ್ಲಾಧ್ಯಕ್ಷ ಕೆರಿಯಪ್ಪ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ರೈತರಿಗೆ ನ್ಯಾಯ ಒದಗಿಸಿ ಕೊಡದಿದ್ದರೆ ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿ ಎರಡು ದಿನದಲ್ಲಿ ಅರಣ್ಯ ಇಲಾಖೆ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಡುವುದಾಗಿ ಎಚ್ಚರಿಕೆ ನೀಡಿದರು. ಸ್ಥಳದಲ್ಲಿ ಬೇಕೇ ಬೇಕು ನ್ಯಾಯ ಬೇಕು ಅಯ್ಯೋಯ್ಯೋ ಅನ್ಯಾಯ ಎನ್ನುವ ಘೋಷಣೆ ಕೂಗಿದರು.