ಸುದ್ದಿ ಕನ್ನಡ ವಾರ್ತೆ

(ಫಲಶ್ರುತಿ)

ಜೋಯಿಡಾ:ತಾಲೂಕಿನ ಗಾಂಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕರಂಬಾಳಿಯಿಂದ ಗಾಂಗೋಡಾವರೆಗೆ ಬಸ್ ಸೇವೆ ಪುನರಾರಂಭ ಮಾಡಿದ್ಡಕ್ಕೆ ಗ್ರಾಮಸ್ಥರು ಸಾರಿಗೆ ಇಲಾಖೆ,ತಾಲೂಕಾಡಳಿತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ತಾಲೂಕಿನ ಗಾಂಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕರಂಬಾಳಿಯಿಂದ ಗಾಂಗೋಡವರೆಗೆ ಸರ್ವ ಋತು ರಸ್ತೆ ಇಲ್ಲದ ಕಾರಣ ಪ್ರತಿ ವರ್ಷ ಮಳೆಗಾಲದಲ್ಲಿ ಸಾರಿಗೆ ಇಲಾಖೆಯವರು ಬಸ್ ಸಂಚಾರ ನಿಲ್ಲಿಸಿದ ಪರಿಣಾಮ, ಸಾರ್ವಜನಿಕರು,ಶಾಲಾ ಕಾಲೇಜಿನ ವಿದ್ಯಾರ್ಥಿಗಳು ತೀವ್ರ ತೊಂದರೆಯನ್ನು ಅನುಭವಿಸುತ್ತಿರುವುದು ಬೇಸರದ ಸಂಗತಿಯಾಗಿದೆ.

ಗಾಂಗೋಡಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಪ್ರವೀಣ ದೇಸಾಯಿ ಹಾಗೂ ತಾಲೂಕು ಮರಾಠ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿಯವರ ನೇತೃತ್ವದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ,ಜೊತೆಯಲ್ಲಿ ಗ್ರಾಮಸ್ಥರು ಶ್ರಮದಾನ ಮಾಡಿ ಕಳೆದ ನಾಲ್ಕು ದಿನಗಳ ಹಿಂದೆ ರಸ್ತೆಯನ್ನು ದುರಸ್ತಿ ಮಾಡಿ,ಗಾಂಗೋಡಾ ಜಾತ್ರೆಯ ಒಳಗೆ ಸಾರಿಗೆ ಬಸ್ ಸೇವೆ ಆರಂಭಿಸುವಂತೆ ಗ್ರಾಮಸ್ಥರು ಸಾರಿಗೆ ಇಲಾಖೆಯವರಿಗೆ ಮನವಿ ಸಲ್ಲಿಸಿದ್ದರು. ಸಾರಿಗೆ ಇಲಾಖೆಯವರು ಮಂಗಳವಾರ ಬಸ್ ಸಂಚಾರ ಪುನರಾರಂಭ ಮಾಡಿದ್ದು,ಗಾಂಗೋಡಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಪ್ರವೀಣ ದೇಸಾಯಿಯವರ ನೇತೃತ್ವದಲ್ಲಿ,ಗಾಂಗೋಡಾ ಮಿರಾಶಿಯವರ ಉಪಸ್ಥಿತಿಯಲ್ಲಿ ಬಸ್ ಗೆ ಪೂಜೆ ಸಲ್ಲಿಸುವ ಮೂಲಕ ಗ್ರಾಮಕ್ಕೆ ಸ್ವಾಗತಿಸಲಾಯಿತು. ಸಾರಿಗೆ ಇಲಾಖೆ ಹಾಗೂ ತಾಲೂಕಾಡಳಿತದವರಿಗೆ ಗ್ರಾಮಸ್ಥರು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು,ಶಾಲಾ,ಕಾಲೇಜಿನ ವಿದ್ಯಾರ್ಥಿಗಳು,ಬಸ್ ನ ಚಾಲಕ,ನಿರ್ವಾಹಕ ಇದ್ದರು.