ಸುದ್ದಿ ಕನ್ನಡ ವಾರ್ತೆ
ದಾಂಡೇಲಿ : ಕಾಳಿ ನದಿಗೆ ತಾಗಿಕೊಂಡಿರುವ ಸಮೃದ್ದ ದಟ್ಟ ಅರಣ್ಯದಲ್ಲಿರುವ ಅದು ಶಿವನ ಮಂದಿರವದು. ಆ ಕಾರಣಕ್ಕಾಗಿಯೆ ಈ ಮಂದಿರದ ಹೆಸರು ಜಂಗಲೇಶ್ವರ ದೇವಸ್ಥಾನ ಎಂಬುವುದಾಗಿದೆ.
ಅಂದ ಹಾಗೆ ನಗರದ ಐಪಿಎಂ ಕಾರ್ಖಾನೆಯ ಹಿಂಬದಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಭಕ್ತ ಜನರ ಆರಾಧನೆಗೆ ಪಾತ್ರವಾಗಿರುವ ದೇವರೆ ಶ್ರೀ.ಜಂಗಲೇಶ್ವರ. ಐಪಿಎಂ ಕಾರ್ಖಾನೆ ಕಾರ್ಯನಿರ್ವಹಣೆಯಲ್ಲಿದ್ದಾಗ ಪ್ರತಿ ದಿನ ಇಲ್ಲಿಪೂಜೆ ನಡೆಯುತ್ತಿತ್ತು. ಕಾರ್ಖಾನೆ ಸ್ಥಗಿತಗೊಂಡ ನಂತರ ಈ ದೇವಸ್ಥಾನದಲ್ಲಿ ಮಹಾಶಿವರಾತ್ರಿಯಂದು ಮಾತ್ರ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಅಂತೆಯೆ ಬುಧವಾರ ಮಹಾಶಿವರಾತ್ರಿ ನಿಮಿತ್ತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀ.ಜಂಗಲೇಶ್ವರನ ಸನ್ನಿಧಿಗೆ ಆಗಮಿಸಿ ಶ್ರೀ ಸ್ವಾಮಿಯ ದರ್ಶನವನ್ನು ಪಡೆದರು.
ದಟ್ಟ ಕಾಡಿನ ಮಧ್ಯೆ ವಿರಾಜಮಾನನಾಗಿರುವ ಶ್ರೀ.ಜಂಗಲೇಶ್ವರ ದೇವಸ್ಥಾನ ವಿಶಿಷ್ಟ ದೇವಸ್ಥಾನವಾಗಿ ಗಮನ ಸೆಳೆದಿದೆ. ಶ್ರೀ.ಜಂಗಲೇಶ್ವರ ದರ್ಶನಕ್ಕೆ ಬರುವ ಭಕ್ತರ ಮನತಣಿಸಲು ಐಪಿಎಂ ನಿವಾಸಿ ಸಧ್ಯ ದುಬೈಯಲ್ಲಿ ಕೆಲಸದಲ್ಲಿರುವ ಪ್ರಮೋದ್ ನಾಯರ್ ಅವರ ಪ್ರಾಯೋಜಕತ್ವದಲ್ಲಿ ಅವರ ಕುಟುಂಬವರ್ಗದವರು ಹಾಗೂ ಪ್ರಮೋದ್ ನಾಯರ ಗೆಳೆಯರ ಬಳಗದವರು ಬಾಳೆ ಹಣ್ಣು, ತಂಪು ಪಾನೀಯ, ಬೆಲ್ಲವನ್ನು ಹಂಚಿ ಪ್ರತಿವರ್ಷದಂತೆ ಈ ವರ್ಷವೂ ತಮ್ಮ ಭಕ್ತಿ ಸಮರ್ಪಣೆಯನ್ನು ಮುಂದುವರೆಸಿದ್ದಾರೆ. ದೇವಸ್ಥಾನಕ್ಕೆ ಹೋಗುವ ಮುನ್ನವೆ ಪ್ರವಾಸೋದ್ಯಮಿ ಮುರಳಿಧರ ನಾಯ್ಕ ಅವರು ಬಾದಾಮಿ ಹಾಲನ್ನು ವಿತರಿಸುವ ಮೂಲಕ ಗಮನ ಸೆಳೆದರು.