ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ನಂದಿಗದ್ದೆ ಬಯಲು ರಂಗಮಂದಿರದಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆಯ ಮಾಹಿತಿ ಕಾರ್ಯಾಗಾರ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕಾರ್ಯಕ್ರಮದ ಆರಂಭದಲ್ಲಿ ತಾಲೂಕಿನ ತೋಟಗಾರಿಕಾ ಇಲಾಖೆಯ ಹೋಬಳಿ ಅಧಿಕಾರಿಗಳಾದ ಯಲ್ಲಾರಲಿಂಗ್ ರವರು ವೇದಿಕೆಯ ಮೇಲಿನ ಗಣ್ಯರನ್ನು ಸ್ವಾಗತಿಸಿದರು.ವೇದಿಕೆಯ ಮೇಲಿನ ಗಣ್ಯರು ಗಿಡಕ್ಕೆ ನೀರನ್ನು ಎರೆಯುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸ್ಕೊಡ್ ವೆಸ್ ಸಂಸ್ಥೆಯ ಡಾ.ವಿನಾಯಕ ಪೈ ಪರಂಪರಾಗತ ಕೃಷಿ ವಿಕಾಸ ಯೋಜನೆಯ ಅನುಷ್ಠಾನ,ಪ್ರಗತಿಯಲ್ಲಿ ನಮ್ಮ ರಾಜ್ಯದ ಉತ್ತರಕನ್ನಡ ಜಿಲ್ಲೆಯಲ್ಲಿಯೇ ಜೋಯಿಡಾ ತಾಲೂಕು ಎಲ್ಲರ ಸಹಕಾರದಿಂದ ಮುಂದಿದ್ದು,ಇದೇ ವೇಗವನ್ನು ಮಂದಿನ ಕಾಯ್ದುಕೊಂಡು ಮಂದಿನ ತರಬೇತಿಯಲ್ಲಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಕರೆ ನೀಡಿದರು. ಜೋಯಿಡಾ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ರಮೇಶ ತುರುಮುರಿ ಮಾತನಾಡುತ್ತಾ ರೈತರು ಉತ್ತಮ ಕೃಷಿಕರಾಗಿದ್ದು,ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿರುವುದು ಒಳ್ಳೇಯ ವಿಚಾರ.ಇಲಾಖೆ ಹಾಗೂ ಸ್ಕೊಡ್ ವೆಸ್ ಸಂಸ್ಥೆಯವರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡು ಯೋಜನೆಯ ಯಶಸ್ಸಿಗೆ ಸಹಕರಿಸಿ ಎಂದು ಹೇಳಿದರು. ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ ಮಾತನಾಡಿ ನಮ್ಮ ಕ್ಷೇತ್ರದ ಶಾಸಕರ ಮುತುವರ್ಜಿಯಿಂದ ಜೋಯಿಡಾ ತಾಲೂಕನ್ನು ಸಂಪೂರ್ಣ ಸಾವಯವ ಕೃಷಿಯ ತಾಲೂಕನ್ನಾಗಿ ಪರಿವರ್ತಿಸುವ ದೃಷ್ಟಿಯಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲರ ಸಹಕಾರ ಮುಖ್ಯ ಎಂದರು.

ವೇದಿಕೆಯ ಮೇಲಿದ್ದ ಗಣ್ಯರು ಪರಂಪರಾಗತ ಕೃಷಿ ವಿಕಾಸ ಯೋಜನೆಯ ಮಾಹಿತಿಯನ್ನು ಒಳಗೊಂಡ ಕೈಪಿಡಿಯನ್ನು ಬಿಡುಗಡೆ ಮಾಡಿದರು,ಜೊತೆಗೆ ತರಬೇತಿಯಲ್ಲಿ ಭಾಗವಹಿಸಿದ ರೈತರಿಗೆ ತರಕಾರಿ ಬೀಜವನ್ನು ಪ್ರಾಯೋಗಿಕವಾಗಿ ನೀಡಲಾಯಿತು. ಮಾಹಿತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಶಂಕರ ಹೆಗಡೆ ನಿವೃತ್ತ ಕೃಷಿ ಅಧಿಕಾರಿಗಳು ಮಣ್ಣಿನ ಮಹತ್ವ,ಅದರಲ್ಲಿರುವ ಅಂಶಗಳು,ಸಂರಕ್ಷಣೆ,ಅದರಲ್ಲಿ ಇರಬೇಕಾದ ಪೋಷಕಾಂಶಗಳು, ಮಣ್ಣಿಗೆ ಗೊಬ್ಬರ ಹಾಕುವಿಕೆ, ನೀರಾವರಿ ಸೌಲಭ್ಯ ಇನ್ನಿತರ ಮಾಹಿತಿಗಳನ್ನು ತಮ್ಮ ಹಾಸ್ಯ ಭರಿತ ಶೈಲಿಯಲ್ಲಿ ರೈತರಿಗೆ ವಿವರವಾಗಿ ನೀಡಿದರು. ಇನ್ನೊರ್ವ ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಡಿ.ಜೆ.ಪಟಗಾರ ರವರು ವಿವಿಧ ಮೂಲಗಳಿಂದ ಸಸ್ಯ ಜನ್ಯ,ಪ್ರಾಣಿ ಜನ್ಯ ಗೊಬ್ಬರಗಳನ್ನು ತಯಾರಿಸುವ,ಅದರ ಬಳಕೆ,ಉಪಯೋಗ,ಮಹತ್ವದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ವೇದಿಕೆಯಲ್ಲಿ ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಇದ್ದರು.ಪರಂಪರಾಗತ ಕೃಷಿ ವಿಕಾಸ ಯೋಜನೆಯ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಅಮರ ಭಾಗವತ ಕಾರ್ಯಾಗಾರದಲ್ಲಿ ಸ್ವಾಗತಿಸಿ,ನಿರೂಪಿಸಿ,ವಂದಿಸಿದರು.ಸಂಪನ್ಮೂಲ ವ್ಯಕ್ತಿಗಳಾದ ಭಾಸ್ಕರ ನಾಯ್ಕ,ಸೂರಜ್ ಕುಮಗಾಳಕರ, ಸುಭಾಷ ನಾಯ್ಕ,ಗ್ರಾಮ ಪಂಚಾಯತ ಸಿಬ್ಬಂದಿಗಳು, ಇನ್ನಿತರರು ಸಹಕಾರ ನೀಡಿದರು.