ಸುದ್ದಿ ಕನ್ನಡ ವಾರ್ತೆ
ಶಿರಸಿ: ಇಂದು ಆಧುನಿಕ ಜೀವನ ಪದ್ಧತಿ ಇದ್ದರೂ ಯಜ್ಞಗಳ ಅನುಷ್ಠಾನ ಬಿಡಬಾರದು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನುಡಿದರು.
ಸೋಮವಾರ ಲೋಕಲ್ಯಾಣಾರ್ಥವಾಗಿ ತಾಲೂಕಿನ ರೇವಣಕಟ್ಟದ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಹಮ್ಮಿಕೊಂಡ ೧೦೦೮ ನಾಲಿಕೇಳ ಗಣಹವನದ ಧರ್ಮ ಸಭೆಯಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು.
ವಿಘ್ನ ನಿವಾರಕ ಮಾತ್ರ ಮಹಾ ಗಣಪತಿಯಲ್ಲ. ಆತ ಸಕಲ ಸಿದ್ಧಿ ಪ್ರದಾಯಕನೂ ಹೌದು. ಅಂಥ ಭಗವಂತನಿಗೆ ಸಹಸ್ರಾಧಿಕ ನಾಲಿಕೇಳ ಗಣಹವನ ಆಗಿದೆ. ಇಂದಿನ ದಿನದಲ್ಲಿ ಇದು ಅತ್ಯಂತ ಅಗತ್ಯವಾಗಿತ್ತು ಎಂದರು.
ಯಜ್ಞಗಳನ್ನು ತಿಳಿದು ಮಾಡಲು ಶ್ರದ್ದೆ, ಏಕಾಗ್ರತೆಯಿಂದ ಮಾಡಿದರೆ ಅದರ ಶಕ್ತಿ ಹೆಚ್ಚು. ಯಜ್ಞವು ಸಾಮೂಹಿಕ ರೋಗಗಳಿಗೆ ಉತ್ತಮ ಪರಿಹಾರ. ಶಾಸ್ತ್ರದಲ್ಲಿ ಕೂಡ ಉಲ್ಲೇಖಿತವಾಗಿದೆ. ಭಗವಂತನ ವಾಣಿಯಲ್ಲಿ ಯಜ್ಞಗಳ ಪ್ರಸ್ತಾಪವಾಗಿದೆ. ದೊಡ್ಡ ದೊಡ್ಡ ಯಜ್ಞಗಳನ್ನು ಸಾಮೂಹಿಕವಾಗಿ ಮಾಡುವದಾದರೂ ಮನೆ ಮನೆಗಳಲ್ಲಿ ಪಂಚ ಯಜ್ಞ ಮಾಡಬಹುದು. ವರ್ಷಕ್ಕೊಂದು ಬಾರಿಯಾದರೂ ಯಜ್ಞ ಮನೆಗಳಲ್ಲಿ ಮಾಡಬೇಕು ಎಂದರು.
ಮನೆಮನೆಗಳಲ್ಲಿ, ವ್ಯಕ್ತಿ ವ್ಯಕ್ತಿಗಳು ಯಜ್ಞ ಮಾಡಿಸುವ ಕೊರತೆ ಇದೆ. ಹಿಂದೂ ಧರ್ಮದಲ್ಲಿ ಯಜ್ಞಕ್ಕೆ ತೀರಾ ಮಹತ್ವ ಇದೆ ಎಂದ ಅವರು, ಮನುಷ್ಯನಿಗೆ ಮೃಗಕ್ಕೆ, ಮರಕ್ಕೆ ಮೂರು ಮ ಕಾರಗಳಿಗೆ ಸಮಸ್ಯೆ ಆಗಿದೆ. ಅದಕ್ಕಾಗಿ ಯಜ್ಞ ಆಗಬೇಕಾಗಿದೆ ಎಂದರು.
ಪಂಚ ಯಜ್ಞ ಮನೆಯಲ್ಲಿ ಸದಾ ಮಾಡಬೇಕು. ದೇವರ ಪೂಜೆ, ವೇದಗಳ ಅನುಸಂಧಾನ, ಗೋವುಗಳ ರಕ್ಷಣೆ, ಪಾಲನೆ, ಪಿತೃ ಯಜ್ಞ, ಅತಿಥಿ ಗೌರವಿಸುವ ಮನುಷ್ಯ ಯಜ್ಞ ಮಾಡಬೇಕು ಎಂದರು.
ಇಂದು ಗೋಶಾಲೆ ನಿಂತು ಹೋಗುತ್ತಿದೆ. ಪಿತೃ ಯಜ್ಞಕ್ಕೆ ಕೂಡ ವೈದಿಕರಿಲ್ಲ ಎಂಬ ಕಾರಣ ಮಹಾ ನಗರದಲ್ಲಿ ಇದ್ದವರು ಎಂದ ಶ್ರೀಗಳು, ಆಧುನಿಕ ಜೀವನ ಪದ್ಧತಿ ಹಾಗೂ ಆಧುನಿಕ ಶಿಕ್ಷಣ ಹಲವು ಪರಿಣಾಮ ನೀಡುತ್ತಿದೆ. ಆಧುನಿಕ ಜೀವನ ಪದ್ಧತಿಯಿಂದ ಸಂತತಿ ಒಂದಕ್ಕೇ ನಿಂತು ಹೋಗಿದೆ ಎಂದೂ ಕಳವಳ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಕರೂರು ಸೀಮಾ ಅಧ್ಯಕ್ಷ ಉಮಾಪತಿ ಭಟ್ಟ ಇತರರು ಇದ್ದರು.
ಫಲ ಸಮರ್ಪಣೆಯನ್ನು ದೇವಸ್ಥಾನದ ಅಧ್ಯಕ್ಷ ವಸಂತ ಹೆಗಡೆ ಸಿರೇಕುಳಿ ಮಾಡಿದರು. ಗಜಾನನ ಭಟ್ ರೇವಣಕಟ್ಟ ಪ್ರಾಸ್ತಾವಿಕ ಮಾತನಾಡಿದರು. ನಾರಾಯಣ ಬುಳ್ಳಿ ನಿರ್ವಹಿಸಿದರು.
ಗಣಪತಿ ಹೆಗಡೆ ಬಪ್ಪನಕೊಡ್ಲು ಅವರನ್ನು ಶ್ರೀಗಳು ಗೌರವಿಸಿದರು. ಮೂರು ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು.
ಶ್ರೀವಾಣಿ-
ಭಗವದ್ಗೀತೆ ಅರಿತು ಪಠಿಸಿ ಅರ್ಥ ಮಾಡಿಕೊಳ್ಳಬೇಕು. ಯಾಜ್ಞಿಕ ಜೀವನ ಪದ್ಧತಿ ಅನುಸರಿಸಿದರೆ ಎಷ್ಟೋ ಸಮಸ್ಯೆಗಳು ದೂರ. ಆಧುನಿಕ ಜೀವನ ಪದ್ದತಿಯಲ್ಲೂ ಯಾಜ್ಞಿಕ ಜೀವನ ಪದ್ಧತಿ ಇಟ್ಟುಕೊಂಡವರು ಇದ್ದಾರೆ. ಹಳ್ಳಿಯಲ್ಲಿ ಯಾಕೆ ಸಾಧ್ಯವಿಲ್ಲ?
– ಸ್ವರ್ಣವಲ್ಲೀ ಶ್ರೀ