ಸುದ್ದಿ ಕನ್ನಡ
ಯಲ್ಲಾಪುರ: ಬೇಡ್ತಿ _ಅಘನಾಶಿ ನದಿ ಜೋಡಣೆ ವಿರುದ್ಧ ಉತ್ತರ ಕನ್ನಡದಲ್ಲಿ ಭಾರಿ ಹೋರಾಟ ನಡೆಯುತ್ತಿದ್ದರು ಕೂಡ ಕರ್ನಾಟಕ ಸರ್ಕಾರದ ಕೆಲಸ ಸಚಿವರು ಯೋಜನೆ ಜಾರಿಗೆ ಬರಲಿದೆ ಎಂಬ ಹೇಳಿಕೆ ನೀಡುತ್ತಲೇ ಇದ್ದಾರೆ. ಪ್ರತಿದಿನ ವೈಮಾನಿಕ ಸಮೀಕ್ಷೆ ಅಂತೂ ನಡೆಯುತ್ತಲೇ ಇದೆ. ಕಳೆದ ಮೂರು ನಾಲ್ಕು ದಿನಗಳಿಂದ ಯಲ್ಲಾಪುರ ತಾಲೂಕಿನ ಕೊಡ್ಲಗಡ್ಡೆ, ಹಳವಳ್ಳಿ, ಮಾಗೋಡು ಭಾಗದಲ್ಲಿ ಅತ್ಯಂತ ಕೆಳಮಟ್ಟದಲ್ಲಿ ವಿಮಾನ ಹಾರಾಟ ಮಾಡುತ್ತಿದ್ದು ಜನತೆ ಕೂಡ ಆತಂಕ ಪಡುವಂತೆ ಮಾಡಿದೆ.

ಶನಿವಾರ ಬೆಳಗ್ಗೆಯಿಂದ ಕೊಡ್ಲ ಗದ್ದೆ ಭಾಗದಲ್ಲಿ ವಿಮಾನ ಹಾರಾಟ ಮುಂದುವರೆದಿದೆ. ಬೇಡ್ತಿ ವರದಾ ನದಿ ಜೋಡಣೆಗೆ ರಾಜ್ಯ ಸರ್ಕಾರ ಒಲವು ತೋರಿದ್ದು ಈ ಯೋಜನೆ ಕಾರ್ಯರೂಪಕ್ಕೆ ಬರುವುದು ನಿಶ್ಚಿತ ಎಂದು ಸಚಿವ ಚೆಲುವರಾಯಸ್ವಾಮಿ ರವರು ಬೆಂಗಳೂರಿನಲ್ಲಿ ಮಾಧ್ಯಮ ಒಂದಕ್ಕೆ ನೀಡಿರುವ ಹೇಳಿಕೆ ಇನ್ನಷ್ಟು ಆತಂಕ ಹೆಚ್ಚಿಸಿದೆ.

ರೈತರು ಯಾವುದಾದರು ಒಂದು ಮರ ಕಡಿದರೆ ಅದಕ್ಕೆ ದಂಡದ ಮೇಲೆ ದಂಡ ಹಾಕಿ ತೊಂದರೆ ಕೊಡುವ ಅರಣ್ಯ ಇಲಾಖೆ ಅಧಿಕಾರಿಗಳು ಈಗ ಎಲ್ಲಿ ಹೋದರು…? ಇಂತಹ ಪರಿಸರ ವಿರೋಧಿ ಯೋಜನೆಯಿಂದ ಅಪಾರ ಪ್ರಮಾಣದಲ್ಲಿ ಅರಣ್ಯ ಸಂಪತ್ತು ನಾಶವಾಗಲಿದೆ. ಆದರೆ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಅರಣ್ಯ ನಾಶವಾದರೂ ಕೇಳುವವರೇ ಇಲ್ಲ ಎಂಬಂತಾಗಿದೆ.

ಒಂದು ಭಾಗಕ್ಕೆ ನೀರು ಒಯ್ಯುವ ಉದ್ದೇಶದಿಂದ ಇನ್ನೊಂದು ಭಾಗ ಅದರಲ್ಲೂ ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಕ್ಕೆ ಧಕ್ಕೆ ಉಂಟಾಗುವಂತೆ ಮಾಡುವುದು ಎಷ್ಟು ಸರಿ…? ಪಶ್ಚಿಮ ಘಟ್ಟ ಪರಿಸರಕ್ಕೆ ಧಕ್ಕೆ ಆದರೆ ಉಳಿಗಾಲ ಇದೆಯೇ…? ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಇರುವ ನೀರನ್ನು ಪಂಪಿಂಗ್ ಮಾಡಿ ಇನ್ನೊಂದೆಡೆ  ಒಯ್ದರೆ ಇಲ್ಲಿ ಅಂತರ್ಜಲ ಬತ್ತಿ ಸಂಪೂರ್ಣ ಹಚ್ಚಹಸುರಿನ ಕಾನನವೇ ಒಣಗಿ ಹೋಗಲಿದೆ ಅಲ್ಲವೇ…?

ಜನಪ್ರತಿನಿಧಿಗಳು ಎಲ್ಲಿ….?
ಜಿಲ್ಲೆಯ ಜನಪ್ರತಿನಿಧಿಗಳು ಈ ವಿಷಯದಲ್ಲಿ ಜನರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಈ ನೈತಿಕ ಹೊಣೆ ಹೊತ್ತು ಅವರೆಲ್ಲರೂ ರಾಜಿನಾಮೆ ನೀಡಬೇಕು ಎಂಬ ಆಗ್ರಹ ವ್ಯಕ್ತವಾಗುತ್ತಿದ್ದರೂ ಕೂಡ ಕ್ಯಾರೆ ಎನ್ನದೆ ಜವಾಬ್ದಾರಿ ಮರೆತು ಆರಾಮವಾಗಿ ಓಡಾಡುತ್ತಿದ್ದಾರೆ ಎಂಬುದು ಹಲವರ ಅಂಬೋಣ. ಆದರೆ ಪಾಪ ಏನು ಮಾಡೋದು ಕುರ್ಚಿ ಬಿಡಲು ಅವರಿಗೆ ಮನಸ್ಸಿಲ್ಲ.

ವಿಮಾನವನ್ನೇ ಕಾಣದ ಹಳ್ಳಿಗಳು ಈಗ ಅತಿ ಹತ್ತಿರದಿಂದ ವಿಮಾನ ಕಾಣುತ್ತಿವೆ, ಒಟ್ಟಾರೆ ಮುಗ್ದ ಹಳ್ಳಿಗಳ ಜನರಿಗೆ ಅತ್ಯಂತ ಕೆಳಮಟ್ಟದಿಂದ ವಿಮಾನ ನೋಡಲು ಅವಕಾಶ ಕಲ್ಪಿಸಿಕೊಟ್ಟ ಇಂತಹ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಏನು ಹೇಳಬೇಕು..? ಉತ್ತರ ಕನ್ನಡ ಜಿಲ್ಲೆಯ ಜನ ಅದರಲ್ಲೂ ಹಳ್ಳಿಗರು ತುಂಬಾ ಮುಗ್ಧ ಜನ. ಇಂತಹ ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸರ್ಕಾರಗಳಿಗೆ ಏನು ಹೇಳಬೇಕು…?

ಸರ್ಕಾರಗಳು. …ಜನರಿಂದ… ಜನರಿಗಾಗಿ.. ಜನರಿಗೋಸ್ಕರ .,. ಅಲ್ಲವೇ