ಸುದ್ದಿ ಕನ್ನಡ ವಾರ್ತೆ

ಶಿರಸಿ:ಜನ ಸೇವೆ ಮಾಡುವಾಗ ಜನರ ಮೇಲೆ ಪ್ರೀತಿ ಇರಬೇಕು. ಆಗ ನಾವು ಮಾಡುವ ಸೇವೆ ಸಾರ್ಥಕ ಎನ್ನಿಸುತ್ತದೆ.
ಮಹಿಳೆ ಮನಸ್ಸು ಮಾಡಿದರೆ ಯಾವ ಕೆಲಸವನ್ನಾದರೂ ಮಾಡಬಹುದು.ಅಂತಹ ಸಾಮರ್ಥ್ಯ ಮಹಿಳೆಯರಿಗಿದೆ.
ಎಂದು ಟ್ರಸ್ಟ್ ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.

ತಾಲೂಕಿನ ಬಸಳೆ ಕೊಪ್ಪದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಒಂದು ತಿಂಗಳ ಕಾಲ ನಡೆಯಲಿರುವ ಉಚಿತ ಹೊಲಿಗೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಯಾವ ಖಾಯಿಲೆ ಬಂದರೂ ಅದನ್ನು ಗುಣಪಡಿಸಬಹುದು.ಆದರೆ ಬಡತನ ಎಂಬ ರೋಗ ಬಂದರೆ ಅದನ್ನು ಗುಣ ಪಡಿಸುವುದು ಬಹಳ‌ಕಷ್ಟ. ನಾವು ಸ್ವಾವಲಂಬಿಯಾಗಿ ಬದುಕಬೇಕು ಎಂದರೆ ಹೊಲಿಗೆ ಉದ್ಯೋಗ ಬಹಳ ಉಪಕಾರಿ ಯಾಗಲಿದೆ. ಅಡುಗೆ ಮತ್ತು ಹೊಲಿಗೆ ಮಹಿಳೆಯರು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ಉತ್ತಮವಾದ ದಾರಿಯಾಗಿದೆ.
ನನ್ನ ದುಡಿಮೆಯ ಕೆಲ ಭಾಗವನ್ನು ಜನಸೇವೆಗೆ ಮುಡಿಪಾಗಿಟ್ಟಿದ್ದೇನೆ. ಒಂದು ತಿಂಗಳುಗಳ ಕಾಲ ಉಚಿತವಾಗಿ ಹೊಲಿಗೆ ತರಬೇತಿ ಶಿಬಿರ ನಡೆಯಲಿದೆ. ಮಹಿಳೆಯರು ಉತ್ತಮವಾಗಿ ಕಲಿತರೆ ನಾವು ಮಾಡಿದ ಕೆಲಸಕ್ಕೆ ಸಾರ್ಥಕತೆ ಸಿಕ್ಕಂತಾಗುತ್ತದೆ ಎಂದರು.

ದೊಡ್ನಳ್ಳಿ ಪಂಚಾಯಿತಿ ಪಿಡಿಓ ಪ್ರೀತಿ ಶೆಟ್ಟಿ ಮಾತನಾಡಿ
ಮಹಿಳೆಯರಿಗೆ ಸ್ವ ಉದ್ಯೋಗವನ್ನು ಕಲಿಸಬೇಕು ಎಂಬ ಉದ್ದೇಶದಿಂದ ಅನಂತಮೂರ್ತಿ ಹೆಗಡೆ ಅವರು ಇಂತಹ‌ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಮೊದಲು ಮಹಿಳೆಯರಿಗೆ ಉದ್ಯೋಗ ಮಾಡಲು ಅವಕಾಶವೇ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಪ್ರತಿಯೊಬ್ಬ ಮಹಿಳೆ ಸ್ವಾವಲಂಬಿಯಾಗಿ ಬದುಕಲು ಅವಕಾಶಗಳಿವೆ. ಉಳಿತಾಯದ ಸಮಯದಲ್ಲಿ ಉದ್ಯೋಗವನ್ನು ಮಾಡಿದರೆ ಕುಟುಂಬದ ಪರಿಸ್ಥಿತಿ ಉತ್ತಮವಾಗುತ್ತದೆ. ಮನೆಯಲ್ಲಿ ಒಬ್ಬರೇ ದುಡಿದರೆ ಮಾತ್ರ ಜೀವನ ನಡೆಸುವುದು ಬಹಳ‌ಕಷ್ಟವಾಗುತ್ತಿದೆ. ಅನಂತಮೂರ್ತಿ ಹೆಗಡೆಯವರು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ .
ಒಂದು ಸರ್ಕಾರ ಮಾಡುವಷ್ಟು ಜನೋಪಯೋಗಿ ಕೆಲಸವನ್ನು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಮಾಡುತ್ತಿದೆ. ಸ್ವಚ್ಛ, ಪ್ರಾಮಾಣಿಕ ಸಜ್ಜನ ವ್ಯಕ್ತಿತ್ವದ ಅಪರೂಪದ ವ್ಯಕ್ತಿ ಅನಂತಮೂರ್ತಿ ಹೆಗಡೆಯವರು. ಉಚಿತ ಹೊಲಿಗೆ ತರಬೇತಿಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೆ ಆ ಕುಟುಂಬ ಉತ್ತಮವಾಗಿರುತ್ತದೆ.
ತಾನು ಬೆಳೆಯುವುದರ ಜೊತೆಗೆ ಇನ್ನೊಬ್ಬರನ್ನು ಬೆಳೆಸುವ ಮನಸ್ಥಿತಿ ಬರಬೇಕಿದೆ. ಆಗ ಆ ಊರು ಅಭಿವೃದ್ಧಿಯಾಗುತ್ತದೆ. ಕೆಲಸ ಮಾಡುವ ಇಚ್ಛಾಶಕ್ತಿಯ ನಮಗಿದ್ದರೆ ಜೀವನದಲ್ಲಿ ಯಶಸ್ಸು ನಮ್ಮದಾಗುತ್ತದೆ.ಎಲ್ಲರಲ್ಲಿಯೂ ಸಾಮರ್ಥ್ಯ ವಿದೆ.‌ಅದರ ಬಳಕೆ ಮಾಡಿಕೊಳ್ಳಬೇಕು. ಅನಂತಮೂರ್ತಿ ಹೆಗಡೆಯವರು ಇಂತ‌ಹ ಉತ್ತಮ ಕಾರ್ಯವನ್ನು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ವನಜಾಕ್ಷಿ ಗೌಡ ಮಾತನಾಡಿ, ಶಿರಸಿಯಲ್ಲಿ ಗಾರ್ಮೆಂಟ್ಸ್ ಆಗುತ್ತಿದೆ. ಇಲ್ಲಿನ ಮಹಿಳೆಯರು ಉತ್ತಮವಾಗಿ ಹೊಲಿಗೆ ಯನ್ನು ಕಲಿತರೆ ನಮ್ಮೂರಿನಲ್ಲೇ ಒಂದು ಗಾರ್ಮೇಂಟ್ಸ್ ತೆರೆಯಬಹುದಾಗಿದೆ. ಮಹಿಳೆಯರು ಮುಂದೆ ಬರಬೇಕು. ಹೊಲಿಗೆ ಯನ್ನು ಉತ್ತಮ‌ವಾಗಿ ಕಲಿತರೆ ಮಹಿಳೆ ತನ್ನ ಜೀವನವನ್ನು ಉಜ್ವಲ ಗೊಳಿಸಿಕೊಳ್ಳಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ರಾಮಾ ಆರೇರ, ರವಿ ಆರೇರ, ಮಾಬ್ಲೇಶ್ವರ ಭಂಡಾರಿ, ಚನ್ನಪ್ಪ , ಸದಾನಂದ ಆರೇರ , ಕೀರಣ ಆಚಾರಿ, ಚೇತನಾ, ಅನಂತಮೂರ್ತಿ ಹೆಗಡೆ ಅವರ ತಂದೆ ಮಾಬ್ಲೇಶ್ವರ ಹೆಗಡೆ, ತಾಯಿ ಶಾರದಾ ಹೆಗಡೆ ಸೇರಿದಂತೆ ಹಲವರು ಇದ್ದರು.
ಶೀಲಾ ಹೆಬ್ಬಾರ ಹಾಗೂ ಚಂದ್ರಶೇಖರ ನಿರ್ವಹಿಸಿದರು.

ಪ್ರಶಂಸೆಗೆ ಪಾತ್ರವಾದ ಉಚಿತ ಹೊಲಿಗೆ ತರಬೇತಿ ಶಿಬಿರ:

ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಉಚಿತ ಹೊಲಿಗೆ ತರಬೇತಿ ಶಿಬಿರವು ಸಾಕಷ್ಟು ಜನಮನ್ನಣೆಗೆ ಪಾತ್ರವಾಗುತ್ತಿದೆ. ಹೊಲಿಗೆ ತರಬೇತಿ ಶಿಬಿರಕ್ಕೆ ಶಿಬಿರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೊಲಿಗೆ ತರಬೇತಿ ಪಡೆಯುತ್ತಿದ್ದಾರೆ. ಈಗಾಗಲೇ ಹಲವು ಭಾಗಗಳಿಂದ ನಮ್ಮೂರಿನಲ್ಲೂ ಹೊಲಿಗೆ ತರಬೇತಿ ಶಿಬಿರ ನಡೆಸುವಂತೆ ಮನವಿಗಳು ಬರುತ್ತಿರುವುದು ಶ್ಲಾಘನೀಯವಾಗಿದೆ.