ಸುದ್ದಿ ಕನ್ನಡ ವಾರ್ತೆ
ಉಡುಪಿ :ಇತಿಹಾಸ ಪ್ರಸಿದ್ಧ ಬಾಳೆಕುದ್ರು ಮಠದ ಪುರಾತನ ವಿಗ್ರಹಗಳ ಕಳ್ಳತನ ಮತ್ತು ಮಾರಾಟ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಬಸವೇಶ್ವರನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಮಠದ ಪೀಠಾಧಿಪತಿಗಳಾದ ಶ್ರೀ ವಾಸುದೇವ ಸದಾಶಿವ ಆಶ್ರಮ ಸ್ವಾಮೀಜಿ ತಮ್ಮ ಮಠಕ್ಕೆ ಬೀಗ ಹಾಕಿ ಪರಾರಿಯಾಗಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾಳೆಕುದ್ರು ಮಠಕ್ಕೆ ಒಂದುವರೆ ಸಾವಿರ ವರ್ಷಕ್ಕೂ ಹೆಚ್ಚು ಪುರಾತನ ಇತಿಹಾಸವಿದೆ . ಈ ಮಠದಲ್ಲಿ ಪುರಾತನ ಕಾಲದ ವಿಗ್ರಹಗಳನ್ನು ಶತಮಾನಗಳಿಂದ ಪೂಜಿಸಿಕೊಂಡು ಬರಲಾಗುತ್ತಿದೆ. ಆದರೆ ಈ ಅಪರೂಪದ ವಿಗ್ರಹಗಳು ಇತ್ತೀಚೆಗೆ ಮಠದಿಂದ ನಾಪತ್ತೆಯಾಗಿದ್ದವು.
ಈ ಪುರಾತನ ವಿಗ್ರಹಗಳು ಕಾಣೆಯಾಗಿರುವ ಬಗ್ಗೆ ಮಠದ ಭಕ್ತರು ಸ್ವಾಮೀಜಿಯವರನ್ನು ಪ್ರಶ್ನಿಸಿದಾಗ ಹಳೆಯ ಮೂರ್ತಿಗಳನ್ನು ವಿಸರ್ಜನೆ ಮಾಡಿ ಹೊಸ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂಬ ಉತ್ತರ ನೀಡಿದ್ದರು. ಆದರೆ ಇದೇ ಪುರಾತನ ವಿಗ್ರಹಗಳು ವೆಬ್ಸೈಟ್ ಒಂದರಲ್ಲಿ ಮಾರಾಟಕ್ಕಿದೆ ಎಂದು ಸುದ್ದಿ ಕಂಡಾಗ ಭಕ್ತರಿಗೆ ಅನುಮಾನ ಹೆಚ್ಚಾಯಿತು.
ಈ ಅನುಮಾನದ ಹಿನ್ನೆಲೆಯಲ್ಲಿ ಮಠದ ಶಿಷ್ಯರೊಬ್ಬರು ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರನಾದರಿಸಿ ಪೊಲೀಸರು ತನಿಖೆಗೆ ಮುಂದಾಗುತ್ತಿದ್ದಂತೆಯೇ ಸ್ವಾಮೀಜಿ ಮಠಕ್ಕೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ. ಇದು ಇನ್ನಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಂತಾಗಿದೆ.
ಭಕ್ತರ ಶ್ರದ್ಧಾಸ್ಥಾನವಾಗಿರುವ ದೇವರ ಮೂರ್ತಿಗಳನ್ನೇ ಮಾರಾಟಕ್ಕೆ ಇಟ್ಟಿರುವುದು ಭಕ್ತರ ಆರ್ಥಿಕ ಭಾವನೆಗೆ ಧಕ್ಕೆಯಾಗಿದೆ ಎಂಬ ಬೇಸರ ವ್ಯಕ್ತವಾಗುತ್ತಿದೆ.
