ಸುದ್ದಿ ಕನ್ನಡ ವಾರ್ತೆ
ನಾಡಿನ ಗಣ್ಯ ಸಾಧಕರನ್ನು ಗುರುತಿಸಿ ಗೌರವಿಸುವ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ಗೆ ಆಯ್ಕೆಯಾಗಿರುವ ನಮ್ಮ ಜಿಲ್ಲೆಯ ಹಿರಿಯ ಪತ್ರಕರ್ತರು ಹಾಗೂ ಮಾರ್ಗದರ್ಶಕರಾದ ಶ್ರೀಯುತ ಜಿ. ಯು. ಭಟ್ ಅವರಿಗೆ ಮತ್ತು ನಾಡಿನ ಹಿರಿಯ ಮುತ್ಸದ್ದಿ ಶ್ರೀ ಕಾಗೋಡು ತಿಮ್ಮಪ್ಪ ಅವರಿಗೆ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನೆ ಸಲ್ಲಿಸಿದ್ದಾರೆ.
ದಶಕಗಳ ಕಾಲ ಸತ್ಯನಿಷ್ಠ, ನಿಷ್ಪಕ್ಷಪಾತ ಹಾಗೂ ಮೌಲ್ಯಾಧಾರಿತ ಪತ್ರಿಕೋದ್ಯಮಕ್ಕೆ ತಮ್ಮನ್ನೇ ಸಮರ್ಪಿಸಿಕೊಂಡವರು ಶ್ರೀ ಜಿ. ಯು. ಭಟ್ ಅವರು. ಜನಸಾಮಾನ್ಯರ ಕಷ್ಟ-ಕಾರ್ಪಣ್ಯಗಳಿಗೆ ಧ್ವನಿಯಾಗಿ, ಸಮಾಜಮುಖಿ ನಿಲುವುಗಳ ಮೂಲಕ ಆಡಳಿತ ವ್ಯವಸ್ಥೆಯನ್ನು ಸದಾ ಎಚ್ಚರಿಸುತ್ತಾ ಬಂದ ಅವರ ಲೇಖನಿಯ ಕೊಡುಗೆ ಅಪಾರ. ಒಬ್ಬ ಹಿರಿಯ ಪತ್ರಕರ್ತರಾಗಿ ಸಮಾಜದ ಹಿತವನ್ನು ಕಾಯ್ದ ಅವರ ಸುದೀರ್ಘ ಪತ್ರಿಕೋದ್ಯಮದ ತಪಸ್ಸಿಗೆ ಈ ರಾಜ್ಯೋತ್ಸವ ಪ್ರಶಸ್ತಿಯ ಮೂಲಕ ಅರ್ಹ ಹಾಗೂ ಸೂಕ್ತ ಗೌರವ ಸಂದಿದೆ.
ಭಗವಂತನು ಅವರಿಗೆ ಆಯುರಾರೋಗ್ಯ, ನೆಮ್ಮದಿ ನೀಡಿ ಇನ್ನಷ್ಟು ಕಾಲ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಅಂತೆಯೇ, ನಾಡಿನ ಶೋಷಿತರ, ರೈತರ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿ ಸಾಮಾಜಿಕ ನ್ಯಾಯದ ಹರಿಕಾರರೆನಿಸಿಕೊಂಡಿರುವ ಹಿರಿಯ ಮುತ್ಸದ್ದಿ ಶ್ರೀ ಕಾಗೋಡು ತಿಮ್ಮಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಅತ್ಯಂತ ಅರ್ಥಪೂರ್ಣ. ಅವರ ರಾಜಕೀಯ ಹಾಗೂ ಸಾಮಾಜಿಕ ಬದುಕಿನ ದೃಢತೆ ನಮಗೆಲ್ಲರಿಗೂ ಸದಾ ಸ್ಫೂರ್ತಿ. ಅವರಿಗೂ ನನ್ನ ಗೌರವಪೂರ್ವಕ ಪ್ರಣಾಮಗಳು.
ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ನಾಡಿನ ಸಮಸ್ತ ಸಾಧಕರಿಗೂ ಹಾಗೂ ಗಣ್ಯರಿಗೂ ನನ್ನ ಹೃದಯಾಂತರಾಳದ ಶುಭಾಶಯಗಳು. ನಾಡಿನ ಸಂಸ್ಕೃತಿ, ಭಾಷೆ ಮತ್ತು ಪ್ರಗತಿಗೆ ನಿಮ್ಮ ಕೊಡುಗೆ ನಿರಂತರವಾಗಿರಲಿ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
