ಸುದ್ದಿ ಕನ್ನಡ ವಾರ್ತೆ
ನದಿ ಜೋಡಣೆ ಯೋಜನೆ ವಿರೋಧಿಸಿ ನವೆಂಬರ್ 3ರಂದು ಯಲ್ಲಾಪುರ ಪಟ್ಟಣದಲ್ಲಿ ನಡೆಯಲಿರುವ ಬೃಹತ್ ರಸ್ತೆ ತಡೆ ಹೋರಾಟಕ್ಕಾಗಿ ಪೂರ್ವ ಸಿದ್ಧತಾ ಸಭೆ ಯಲ್ಲಾಪುರದ TMS ಸಭಾಭವನದಲ್ಲಿ ಬುಧವಾರ ನಡೆಯಿತು.
ಈ ಸಭೆಯಲ್ಲಿ ರಸ್ತೆ ತಡೆ ಸಂಚಾಲನ ಸಮಿತಿ ಅಧ್ಯಕ್ಷ NK ಭಟ್ ಅಗ್ಗಾಶಿಕುಂಬ್ರಿ ಮಾತನಾಡಿ , ನದಿ ಉಳಿವಿನ ಹೋರಾಟವನ್ನು ಇಡೀ ಉತ್ತರ ಕನ್ನಡ ಜಿಲ್ಲೆಯ ಹೋರಾಟವನ್ನಾಗಿ ರೂಪಿಸಬೇಕು. ಈ ಹೋರಾಟಕ್ಕೆ ಜಿಲ್ಲೆಯ ಜನರ ಹೆಚ್ಚಿನ ಬೆಂಬಲ ಅಗತ್ಯವಿದ್ದು ಪಕ್ಷಾತೀತವಾಗಿ ಎಲ್ಲಾ ಜನ ಪ್ರತಿನಿಧಿಗಳು ಕೂಡ ಇದರಲ್ಲಿ ಭಾಗವಹಿಸಬೇಕು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರದ ಗಮನ ಸೆಳೆಯಬೇಕು ಎಂದು ಎನ್ಕೆ ಭಟ್ ನುಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಸ್ತೆ ತಡೆ ಸಂಚಾಲನ ಸಮಿತಿ ಸಂಚಾಲಕ ಹರಿಪ್ರಕಾಶ್ ಕೋಣೆ ಮನೆ ಮಾತನಾಡಿ, ನದಿಗಳ ಜೋಡಣೆಯ ವಿಚಾರದಲ್ಲಿ ಇಡೀ ಜಿಲ್ಲೆಯ ಜನರು ಸ್ವಯಂ ಪ್ರೇರಣೆಯಿಂದ ಹೋರಾಟಕ್ಕೆ ಮುಂದಾಗುವಂತ ವಾತಾವರಣ ನಿರ್ಮಿಸಬೇಕು. ನದಿ ಜೋಡಣೆ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಯ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮ ಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರು.
ರಸ್ತೆ ತಡೆ ಹೋರಾಟಕ್ಕೆ ಸಂಘಟನಾ ಕಾರ್ಯಗಳಿಗೆ ಅಗತ್ಯವಸ್ತೆ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಸಮಿತಿಗಳನ್ನು ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಮನೆಗಳಿಗೆ ತೆರಳಿ ನದಿ ಜೋಡಣೆ ಯೋಜನೆಯ ಕುರಿತು ಹಾಗೂ ಹೋರಾಟದ ಉದ್ದೇಶದ ಬಗ್ಗೆ ಜನರಿಗೆ ಮಾಹಿತಿ ನೀಡಲು ಪ್ರಮುಖರಿಗೆ ಜವಾಬ್ದಾರಿ ನೀಡಲಾಯಿತು.
ಈ ಸಭೆಯಲ್ಲಿ ರವಿ ಹೆಗಡೆ, ಶ್ರೀರಾಮ ಲಾಲಗುಳಿ, ರಾಘವೇಂದ್ರ ಭಟ್, ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ, ಸುಬ್ಬಣ್ಣ ಬೋಳಮನೆ, ವೆಂಕಟರಮಣ ಭಟ್ ಕಿರಕುಂಬತ್ತಿ, ಮತ್ತಿತರರು ಉಪಸ್ಥಿತರಿದ್ದರು.
ಕೊಳ್ಳ ಸಂರಕ್ಷಣಾ ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.
