ಸುದ್ದಿ ಕನ್ನಡ ವಾರ್ತೆ

ಮೋಕಿ (ಚೀನಾ): ಚೀನಾದ ಮೋಕಿಯಲ್ಲಿ ನಡೆದ ಮಹಿಳೆಯರ ಮತ್ತು ಪುರುಷರ ಜೂನಿಯರ್ ಹಾಕಿ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ರವಿವಾರ ಎರಡೂ ವಿಭಾಗಗಳಲ್ಲಿ ಭಾರತ ಸತತ ಮೂರನೇ ಬಾರಿಗೆ ಪ್ರಶಸ್ತಿಗಳನ್ನು ಜಯಿಸಿದೆ.
​ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಭಾರತ ಚೀನಾವನ್ನು 1-0 ಗೋಲಿನಿಂದ ಸೋಲಿಸಿ ಪ್ರಶಸ್ತಿ ಜಯಿಸಿತು.

​ಪಂದ್ಯದ ಏಕೈಕ ಗೋಲನ್ನು ಭಾರತದ ಸನಿಕಾ ಮಾಣೆ 17ನೇ ನಿಮಿಷದಲ್ಲಿ ಬಾರಿಸಿದರು. ಈ ಪ್ರಶಸ್ತಿಯೊಂದಿಗೆ, ಭಾರತವು ಮುಂದಿನ ವರ್ಷ ನಡೆಯಲಿರುವ ಎಫ್‌ಐಎಚ್ ಜೂನಿಯರ್ ಮಹಿಳಾ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿದೆ.ಪುರುಷರ ವಿಭಾಗದ ಫೈನಲ್‌ನಲ್ಲಿ ಭಾರತವು ದಕ್ಷಿಣ ಕೊರಿಯಾವನ್ನು 4-1 ಗೋಲುಗಳ ಅಂತರದಿಂದ ಸೋಲಿಸಿ ಸತತ ಮೂರನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

​ಈ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡವು ಮುಂದಿನ ವರ್ಷ ನಡೆಯಲಿರುವ ಎಫ್‌ಐಎಚ್ ಪುರುಷರ ಜೂನಿಯರ್ ಹಾಕಿ ವಿಶ್ವಕಪ್ ಪಂದ್ಯಾವಳಿಯಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
​ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಭಾರತದ ನಾಯಕ ಅನ್ಮೋಲ್ ಎಕ್ಕಾ ಮತ್ತು ಅಜಿತ್ ಯಾದವ್ ತಲಾ ಒಂದು ಗೋಲು ಗಳಿಸಿದರೆ, ಎರಡನೇ ಕ್ವಾರ್ಟರ್‌ನಲ್ಲಿ ಪ್ರಭ್‌ಪ್ರೀತ್ ಸಿಂಗ್ ಮತ್ತೊಂದು ಗೋಲು ಸೇರಿಸಿ ಮುನ್ನಡೆಯನ್ನು ಹೆಚ್ಚಿಸಿದರು.

​ಬಳಿಕ 50ನೇ ನಿಮಿಷದಲ್ಲಿ ಆಶು ಮೌರ್ಯ ಗಳಿಸಿದ ಗೋಲು ಭಾರತದ ಗೆಲುವನ್ನು ಖಚಿತಪಡಿಸಿತು. ಇದಾದ ನಾಲ್ಕು ನಿಮಿಷಗಳ ನಂತರ ಕೊರಿಯಾ ತಂಡದ ನಾಯಕ ಲೀ ಮಿನ್ಹ್ಯಕ್ ಒಂದು ಸಮಾಧಾನಕರ ಗೋಲು ಬಾರಿಸಿದರು.