ಸುದ್ದಿ ಕನ್ನಡ ವಾರ್ತೆ
ಶಿರಸಿ: ಯಕ್ಷಗಾನ ದೃಶ್ಯ ಕಾವ್ಯ. ಕಾವ್ಯಕ್ಕೆ ದೃಶ್ಯದ ಸೊಗಸು ನೀಡುವ ಕಲೆ
ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ನುಡಿದರು.
ಭಾನುವಾರ ಯಕ್ಷಶಾಲ್ಮಲಾದ ೨೨ನೇ ಯಕ್ಷೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭದ ಸಮಾರೋಪದಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.
ಕಾವ್ಯದಿಂದ ಯಶಸ್ಸು, ವ್ಯವಹಾರ, ಮೌಲ್ಯಗಳನ್ನು ಕೊಡುತ್ತದೆ. ಇಷ್ಟೇ ಅಲ್ಲ, ಅಮಂಗಳವನ್ನು ನಾಶ ಮಾಡುತ್ತದೆ. ಯಕ್ಷಗಾನ ಇವನ್ನೆಲ್ಲ ಸಮರ್ಥವಾಗಿ ಮಾಡುತ್ತಿದೆ ಎಂದರು.
ಹರಕೆಯ ಯಕ್ಷಗಾನದ ಮೂಲಕ ಸಂಕಷ್ಟ ನಾಶವಾಗುತ್ತದೆ. ದೃಶ್ಯಕಾವ್ಯವಾದ ಯಕ್ಷಗಾನ ಸವಿದವನಿಗೆ ಇಂಥದೊಂದು ಆನಂದ ಪ್ರಾಪ್ತ ಆಗುತ್ತದೆ ಎಂದರು.
ತಾಳಮದ್ದಲೆಯಲ್ಲಿ ಅರ್ಥಗಾರಿಕೆಗೆ ಮುಖ್ಯ. ಅದಕ್ಕೆ ವಿಶಿಷ್ಟ ಹೊಣೆಗಾರಿಕೆ ಇದೆ. ಅದನ್ನು ಅರಿತು ಮುನ್ನಡೆದರೆ ಯಕ್ಷಗಾನದ ಮೂಲ ಆಶಯ ಈಡೇರುತ್ತದೆ ಎಂದರು.
ದಿವಂಗತ ಎಂ.ಎ.ಹೆಗಡೆ ದಂಟ್ಕಲ್ ಪ್ರಶಸ್ತಿಯನ್ನು ಸ್ವೀಕರಿಸಿದ, ಉಡುಪಿಯ ಸದಾನಂದ ಐತಾಳ ಮಾತನಾಡಿ, ಯಕ್ಷಗಾನ ರಂಗದ ಅಪಸವ್ಯಗಳು ನಡೆಯುತ್ತಿವೆ. ರಂಗದಲ್ಲಿ ಅತಿರೇಖಗಳು ನಡೆಯುತ್ತಿದೆ. ಶುದ್ಧತೆ ಉಳಿಸಿಕೊಂಡು ಮುನ್ನಡೆಯಬೇಕು. ಎಂ.ಎ.ಹೆಗಡೆ ಅವರು ಯಕ್ಷಗಾನಕ್ಕೆ ಕೊಟ್ಟ ಕೊಡುಗೆ ಸಣ್ಣದಲ್ಲ. ಯಕ್ಷಗಾನವನ್ನು ಚಿಣ್ಣರಿಗೆ ಕಲಿಸುವದರಿಂದ ಯಕ್ಷಗಾನದ ಭವಿಷ್ಯ ಸುಭದ್ರವಾಗಿ ಇರಲಿದೆ. ಮಕ್ಕಳನ್ನು ಯಕ್ಷಗಾನಕ್ಕೆ ಕಳಿಸಬೇಕು. ಪಾಲಕರು ಮಕ್ಕಳನ್ನು ಉತ್ತೇಜಿಸಬೇಕು ಎಂದರು.
ಯಕ್ಷಶಾಲ್ಮಲಾ ಕಾರ್ಯದರ್ಶಿ ನಾಗರಾಜ್ ಜೋಶಿ, ಐತಾಳರ ಕುರಿತು ಅಭಿನಂದನಾ ನುಡಿ ಮಾತನಾಡಿ, ಯಕ್ಷಗಾನ ಶಾಸ್ತ್ರೀಯ ಕಲೆಯಾಗಲಿ, ಐತಾಳರ ಪಠ್ಯಕ್ರಮ ಎಲ್ಲಡೆ ಅನುಸರಿಸುವಂತೆ ಆಗಲಿ ಎಂದರು.
ವೇದಿಕೆಯಲ್ಲಿ ಯಕ್ಷ ಶಾಲ್ಮಲಾದ ಕಾರ್ಯಾಧ್ಯಕ್ಷ ಆರ್.ಎಸ್.ಹೆಗಡೆ ಭೈರುಂಬೆ, ಕಾರ್ಯದರ್ಶಿ ನಾಗರಾಜ ಜೋಶಿ, ಅರ್ಥಧಾರಿ ಎಂ.ಎನ್.ಹೆಗಡೆ ಹಲವಳ್ಳಿ ಇದ್ದರು. ಜಿ.ಜಿ.ಹೆಗಡೆ ಕನೇನಳ್ಳಿ ಫಲ ಸಮರ್ಪಿಸಿದರು. ಶ್ರೀನಿವಾಸ ಮತ್ತಿಘಟ್ಟ ನಿರ್ವಹಿಸಿದರು.
ಸ್ಪರ್ಧಾಳುವಾದ ಪ್ರಣತಿ ಕಟ್ಟಿಗೆ ಹಾಗೂ ಪ್ರಾರ್ಥನಾ ಭಟ್ ಅಗಸಾಲ ಬೊಮ್ಮನಳ್ಳಿ, ನಿರ್ಣಯಾಕರ ಪರವಾಗಿ ಮಂಜುನಾಥ ಗೊರಮನೆ ಮಾತನಾಡಿದರು. ಪ್ರಶಸ್ತಿ ಪತ್ರವನ್ನು ಮಹಾಬಲೇಶ್ವರ ಭಟ್ಟ ಕಿರಕುಂಭತ್ತಿ ವಾಚಿಸಿದರು.
ನಿರ್ಣಾಯಕರಾಗಿ ಗಣಪತಿ ಗುಂಜಗೋಡ, ಗಣಪತಿ ಕಬ್ಬಿನಮನೆ, ಆರ್.ಟಿ.ಭಟ್ಟ ಕಬಗಾರು, ಮಂಜುನಾಥ ಗೊರಮನೆ, ಶ್ರೀನಿವಾಸ ಮತ್ತಿಗಟ್ಟ, ಶಿವರಾಮ ಭಾಗವತ್, ನಿರಂಜನ ಜಾಗನಳ್ಳಿ, ನಾಗರಾಜ ಕೆಕ್ಕಾರ, ಆಶಾ ಸತೀಶ ಭಾಗವಹಿಸಿದ್ದರು.
ಬಾಕ್ಸ್
ಯಕ್ಷಗಾನದ ಕುಣಿತ, ವೇಷಭೂಷಣಗಳೆಲ್ಲ ಗಡಸು ಎಂಬ ಕಾರಣಕ್ಕೆ ಗಂಡು ಕಲೆ ಎಂದು ಹೇಳಲಾಗಿದೆ. ಹೆಣ್ಮಕ್ಕಳು ಮಾಡಬಾರದೆಂದಲ್ಲ. ಈ ಕಲೆ ಮಹಿಳೆಯರು, ಪುರುಷರು, ಮಕ್ಕಳು, ಮುದುಕರು ಎಲ್ಲರಿಗೂ ಸೇರಿದ ಕಲೆ.
-ಸದಾನಂದ ಐತಾಳ, ಉಡುಪಿ ಯಕ್ಷಗುರು
ಯಕ್ಷಗಾನ ಅಘನಾಶಿನಿಯಂತೆ ನಿತ್ಯ ನೂತನವಾಗಿ ಹರಿಯಲಿ. ಯಕ್ಷಗಾನ ರಕ್ಷಣೆ ಜೊತೆಗೆ ಅಘನಾಶಿನ೮, ಶರಾವತಿಯ ರಕ್ಷಣೆಯೂ ಆಗಬೇಕು.
ಸ್ವರ್ಣವಲ್ಲೀ ಶ್ರೀ
ಹಸಿರು ಸ್ವಾಮೀಜಿಗಳು ಯಕ್ಷಗಾನ ಸ್ವಾಮೀಜಿಗಳು ಹೌದು. ಸದಾ ಈ ಕಲೆಗೆ ಪ್ರೋತ್ಸಾಹಿಸುವ ಶ್ರೀಗಳು.
ನಾಗರಾಜ್ ಜೋಶಿ, ಕಾರ್ಯದರ್ಶಿ, ಯಕ್ಷಶಾಲ್ಮಲಾ
