ಸುದ್ದಿ ಕನ್ನಡ ವಾರ್ತೆ

ಬೇಡ್ತಿ-ಹಿರೆವದ್ದತ್ತಿ ನದಿ ಜೋಡಣೆ ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರವು ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಲು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ, ಇಂದು ನವದೆಹಲಿಯಲ್ಲಿ ಮಾನ್ಯ ಕೇಂದ್ರ ಜಲಶಕ್ತಿ ಸಚಿವರಾದ ಸಿ. ಆರ್. ಪಾಟೀಲ್ ಅವರನ್ನು ಭೇಟಿಯಾಗಿ ಯೋಜನೆಯ ಕುರಿತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸುದೀರ್ಘವಾಗಿ ಚರ್ಚಿಸಿದರು.

​”ಕರ್ನಾಟಕ ರಾಜ್ಯ ಸರ್ಕಾರವು ಈ ಯೋಜನೆಗೆ ಡಿಪಿಆರ್ (DPR) ಮಾಡಲು ಒಪ್ಪಿಗೆ ನೀಡಿರುವುದು ಸರಿಯಾದ ಕ್ರಮವಲ್ಲ. ಪಶ್ಚಿಮ ಘಟ್ಟಗಳ ಅತ್ಯಂತ ಸೂಕ್ಷ್ಮ ಪರಿಸರ ವಲಯದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ‘ಧಾರಣ ಸಾಮರ್ಥ್ಯ’ವನ್ನು (Carrying Capacity) ಸಂಪೂರ್ಣವಾಗಿ ವೈಜ್ಞಾನಿಕವಾಗಿ ಅಧ್ಯಯನ ಮಾಡಿದ ನಂತರವೇ ಇಂತಹ ಯೋಜನೆಗಳ ಕುರಿತು ಮುಂದಿನ ನಿರ್ಧಾರವನ್ನು ಕೈಗೊಳ್ಳಬೇಕು.

ಜಿಲ್ಲೆಯ ಪರಿಸರ ಮತ್ತು ಧಾರಣ ಸಾಮರ್ಥ್ಯದ ಅಧ್ಯಯನವಾಗದೇ ಯೋಜನೆಯನ್ನು ಮುಂದುವರಿಸುವುದು ತೀವ್ರ ಆತಂಕಕಾರಿ ವಿಷಯವಾಗಿದೆ. ಆದ್ದರಿಂದ ಪ್ರಸ್ತುತ ಪ್ರಾರಂಭವಾಗಿರುವ ಡಿಪಿಆರ್ ತಯಾರಿಕೆ ಸೇರಿದಂತೆ ಈ ಯೋಜನೆಯ ಎಲ್ಲಾ ಚಟುವಟಿಕೆಗಳನ್ನು ತಕ್ಷಣವೇ ತಡೆಹಿಡಿಯಬೇಕು,” ಎಂದು ಮಾನ್ಯ ಸಚಿವರಿಗೆ ಮನವಿ ಪತ್ರ ನೀಡಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಲವಾಗಿ ಆಗ್ರಹಿಸಿದ್ದಾರೆ.