ಸುದ್ದಿ ಕನ್ನಡ ವಾರ್ತೆ

ದಾಂಡೇಲಿ : ಗದಗದ ಕಲಾ ವಿಕಾಸ ಪರಿಷತ್ ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಜಯಂತೋತ್ಸವದ ನಿಮಿತ್ತ ಕೊಡ ಮಾಡುವ ಸುವರ್ಣ ಕರ್ನಾಟಕ ಸಿರಿ ರಾಜ್ಯ ಪ್ರಶಸ್ತಿಗೆ ದಾಂಡೇಲಿಯ ಹೆಸರಾಂತ ಕಲಾ ಸಂಸ್ಥೆ ಹಾಗೂ ಕಲಾವಿದೆ, ಸಂಗೀತ ಗುರು ಶಶಿಕಲಾ ಚಂದ್ರಕಾಂತ್ ಗೋಪಿ ಅವರ ಸಾರಥ್ಯದ ಸುಸ್ವರ ಸಂಗೀತ ವಿದ್ಯಾಸಂಸ್ಥೆಯು ಭಾಜನವಾಗಿದೆ.

 

ಕಳೆದ ಹಲವು ವರ್ಷಗಳಿಂದ ನಗರದಲ್ಲಿ ಸುಸ್ವರ ಸಂಗೀತ ವಿದ್ಯಾಸಂಸ್ಥೆಯ ಮೂಲಕ ಸಾಕಷ್ಟು ಮಕ್ಕಳಿಗೆ ಯಶಸ್ವಿಯಾಗಿ ತರಬೇತಿಯನ್ನು ನೀಡುತ್ತಿರುವ ಹೆಗ್ಗಳಿಕೆ ಸುಸ್ವರ ಸಂಗೀತ ವಿದ್ಯಾಸಂಸ್ಥೆಗಿದೆ. ಈ ಸಂಸ್ಥೆಯ ಅನುಪಮ ಸೇವೆಯನ್ನು ಗುರುತಿಸಿ ಕಲಾ ವಿಕಾಸ ಪರಿಷತ್ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

 

ಧಾರವಾಡದ ಸಾಧನಕೇರಿಯಲ್ಲಿರುವ ದ.ರಾ.ಬೇಂದ್ರೆ ಭವನದಲ್ಲಿ ಕಲಾ ವಿಕಾಸ ಪರಿಷತ್ ಅಧ್ಯಕ್ಷರಾದ ಸಿ.ಕೆ.ಎಚ್ ಶಾಸ್ತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿಗಳಾದ ಬಸು ಬೇವಿನಗಿಡದ, ರಂಗ ನಿರ್ದೇಶಕರಾದ ವಿಶ್ವೇಶ್ವರಿ ಹಿರೇಮಠ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಲಲಿತ ಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಎ.ಎಲ್. ದೇಸಾಯಿ ಅವರ ಘನ ಉಪಸ್ಥಿತಿಯಲ್ಲಿ ಸುಸ್ವರ ಸಂಗೀತ ವಿದ್ಯಾಲಯದ ಪ್ರವರ್ತಕಿ ಶಶಿಕಲಾ ಚಂದ್ರಕಾಂತ್ ಗೋಪಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನವಾದ ಸುಸ್ವರ ಸಂಗೀತ ವಿದ್ಯಾಸಂಸ್ಥೆಯ ಈ ಸಾಧನೆಗೆ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.