ಸುದ್ದಿ ಕನ್ನಡ ವಾರ್ತೆ

ಕುಮಟಾ: ಬಿಜೆಪಿ ರೈತಮೋರ್ಚಾ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಕುಮಟಾದ ಪ್ರಗತಿಪರ ಕೃಷಿಕ ಎನ್.ಡಿ. ಹೆಗಡೆ ಅವರ ಕಡಸಾಲಗದ್ದೆಯ ತೋಟದಲ್ಲಿ ನೈಸರ್ಗಿಕ ಕೃಷಿ ಕಾರ್ಯಾಗಾರ ನಡೆಯಿತು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕಾಳುಮೆಣಸಿನ ಗಿಡಕ್ಕೆ ರಸಸಾರ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಸಂಸದರು, “ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರವು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ತಂತ್ರಜ್ಞಾನ ಹಾಗೂ ಐಟಿ-ಸಾಫ್ಟ್‌ವೇರ್ ಕಂಪನಿಗಳು ಎಷ್ಟೇ ಬೆಳೆದರೂ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ನಾವೆಲ್ಲರೂ ಊಟ ಮಾಡಲು ರೈತರು ಬೆಳೆದ ಬೆಳೆಯೇ ಬೇಕು” ಎಂದರು. “ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರೈತರು ಸಾವಯವ ಕೃಷಿಯನ್ನು ಅವಲಂಬಿಸಬೇಕು ಎನ್ನುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಕೇಂದ್ರ ಸರ್ಕಾರವು ‘ಕಿಸಾನ್ ಸಮ್ಮಾನ್ ನಿಧಿ’ಯ ಮೂಲಕ ವರ್ಷಕ್ಕೆ 6,000 ರೂಪಾಯಿಗಳನ್ನು ತಲಾ 2,000 ರೂಪಾಯಿಯಂತೆ ಮೂರು ಕಂತುಗಳಲ್ಲಿ ನೀಡಿ ರೈತರನ್ನು ಪ್ರೋತ್ಸಾಹಿಸುತ್ತಿದೆ. ಮೋದಿಯವರು ಪ್ರಧಾನಿಯಾಗಿ ದೇಶ ಮುನ್ನಡೆಸುತ್ತಿರುವ ಅವಧಿಯಲ್ಲಿ ರೈತರ ಹಿತದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ತಂದಿದ್ದಾರೆ. ಮಣ್ಣಿನ ಪರೀಕ್ಷೆ ನಡೆಸಿ ರೈತರಿಗೆ ‘ಸಾಯಿಲ್ ಹೆಲ್ತ್ ಕಾರ್ಡ್’ (ಮಣ್ಣಿನ ಆರೋಗ್ಯ ಕಾರ್ಡ್) ವಿತರಿಸಲಾಗಿದೆ. ಪ್ರತಿಯೊಬ್ಬ ರೈತರೂ ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಕರೆ ನೀಡಿದರು.

ಕೇಂದ್ರ ಸರ್ಕಾರದ ‘ಪಿ.ಎಂ ಪ್ರಣಾಮ್’ ಯೋಜನೆ ಹಾಗೂ ‘ಖೇತ್ ಬಚಾವೋ’ (ಹೊಲ ಉಳಿಸಿ) ಅಭಿಯಾನದ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೇವಲ ಹಣ ಗಳಿಸುವುದೇ ಜೀವನದ ಗುರಿಯಾಗಬಾರದು. ಸಮಾಜದ ಹಿತ ಕಾಯಲು ನಾವೆಲ್ಲರೂ ನೈಸರ್ಗಿಕ ಕೃಷಿಯತ್ತ ಸಾಗಬೇಕು” ಎಂದು ಅವರು ತಿಳಿಸಿದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, “ಅಂತ್ರವಳ್ಳಿಯಲ್ಲಿ ಎನ್.ಡಿ. ಹೆಗಡೆಯವರು 18 ರಿಂದ 20 ಎಕರೆ ಜಾಗದಲ್ಲಿ ಅತ್ಯುತ್ತಮವಾಗಿ ಕಾಳುಮೆಣಸು ಮತ್ತು ಅಡಿಕೆಯನ್ನು ಬೆಳೆದು ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಈಗ ಎಲ್ಲೆಡೆ ರಾಸಾಯನಿಕಗಳ ಬಳಕೆ ಹೆಚ್ಚಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರಾಸಾಯನಿಕ ಮುಕ್ತ ಸಾವಯವ ಕೃಷಿಯ ಮೂಲಕ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ” ಎಂದರು.

ಪ್ರಗತಿಪರ ಕೃಷಿಕ ಎನ್.ಡಿ. ಹೆಗಡೆ ಮಾತನಾಡಿ, “ನಾವು 40 ರಿಂದ 50 ಎಕರೆಯಲ್ಲಿ ನೈಸರ್ಗಿಕ ವಿಧಾನದಿಂದ ಸುಮಾರು 500 ಕ್ವಿಂಟಾಲ್ ಕಾಳುಮೆಣಸು ಬೆಳೆದಿದ್ದೇವೆ. ಹಿಂದೆ ಹೇಗೆ ವಿದೇಶಿಗರು ಕಾಳುಮೆಣಸನ್ನು ಹುಡುಕಿಕೊಂಡು ಭಾರತಕ್ಕೆ ಬರುತ್ತಿದ್ದರೋ, ಅಂತಹ ವಾತಾವರಣ ಮತ್ತೆ ನಿರ್ಮಾಣವಾಗಬೇಕಿದೆ. ಕೆಲ ತಿಂಗಳ ಹಿಂದೆ ವಿದೇಶಿ ಪ್ರತಿನಿಧಿಗಳು ನಮ್ಮ ತೋಟಕ್ಕೆ ಭೇಟಿ ನೀಡಿದ್ದರು. ರಾಸಾಯನಿಕ ಮುಕ್ತವಾದ, ಬೆಟ್ಟದ ಸಾಲಿನಲ್ಲಿ ನೈಸರ್ಗಿಕವಾಗಿ ಬೆಳೆಯುವ ಕಾಳುಮೆಣಸನ್ನು ಒದಗಿಸಲು ಸಾಧ್ಯವೇ ಎಂದು ಕೇಳಿದ್ದರು. ನಮ್ಮ ಕೃಷಿ ತೋಟಕ್ಕೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಗಣ್ಯರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ” ಎಂದು ತಮ್ಮ ಅನುಭವ ಹಂಚಿಕೊಂಡರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, “ಸಾವಯವ ಕೃಷಿ ಪದ್ಧತಿಯನ್ನು ಬಳಸಿ ಯಾವ ರೀತಿ ಉತ್ತಮ ಬೆಳೆ ತೆಗೆಯಬಹುದು ಎಂದು ರೈತರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮೋದಿಯವರ ನೇತೃತ್ವದ ಆಡಳಿತವು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಕೃಷಿಗೆ ಹೆಚ್ಚಿನ ಉತ್ತೇಜನ ನೀಡಲು ಇಂತಹ ಚಟುವಟಿಕೆಗಳ ಮೂಲಕ ಜಿಲ್ಲೆಯ ರೈತರನ್ನು ಪ್ರೇರೇಪಿಸುತ್ತಿದ್ದೇವೆ” ಎಂದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ, “ಹಿಂದೆ ನಮ್ಮ ಹಿರಿಯರ ಕಾಲದಲ್ಲಿ ‘ಕೃಷಿ ಉತ್ತಮ, ವ್ಯಾಪಾರ ಮಧ್ಯಮ, ಉದ್ಯೋಗ ಕನಿಷ್ಠ’ ಎನ್ನುವ ಮನೋಭಾವ ಇತ್ತು. ಆದರೆ ಈಗ ಕಾಲ ಬದಲಾಗಿ ‘ಉದ್ಯೋಗ ಉತ್ತಮ, ವ್ಯಾಪಾರ ಮಧ್ಯಮ, ಕೃಷಿ ಕನಿಷ್ಠ’ ಎನ್ನುವಂತಾಗಿದೆ. ಕೃಷಿಕರಿಗೆ ಹೆಣ್ಣು ಸಿಗುತ್ತಿಲ್ಲ, ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಇಂತಹ ಸಮಸ್ಯೆಗಳಿಗೆ ನಾವು ಅನುಸರಿಸಿಸುತ್ತಿರುವ ಕೃಷಿ ಪದ್ಧತಿಯೇ ಮುಖ್ಯ ಕಾರಣ. ನಾವು ಸಾಂಪ್ರದಾಯಿಕ ಸಾವಯವ ಕೃಷಿಯನ್ನು ಬಿಟ್ಟು ರಾಸಾಯನಿಕ ಕೃಷಿಗೆ ಮೊರೆ ಹೋದಾಗಿನಿಂದ ಹಿನ್ನಡೆ ಆರಂಭವಾಗಿದೆ. ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾದಂತೆ ನಾವು ತಿನ್ನುವ ತರಕಾರಿ, ಹಣ್ಣುಗಳೆಲ್ಲವೂ ವಿಷಮುಕ್ತವಾಗಿರದೆ ರೋಗಕಾರಕವಾಗುತ್ತಿವೆ” ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕೃಷಿ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಕೃಷಿಕರಾದ ನಾಗು ಗೌಡ ಕಡ್ನೀರು, ಜೇನು ಕೃಷಿಕ ಸಂತೋಷ ಹೆಗಡೆ ಶಿರಸಿ, ವಿಷ್ಣು ಜಟ್ಟು ಗೌಡ ಮೂರುರೂ, ಲಕ್ಷ್ಮೀನಾರಾಯಣ ಹೆಗಡೆ ಕಲ್ಲಬ್ಬೆ, ಮಂಜುನಾಥ ಬೀರಾ ಗೌಡ ಕಂದೊಳ್ಳಿ, ಪ್ರಗತಿಪರ ಕೃಷಿಕ ಎನ್.ಡಿ. ಹೆಗಡೆ, ಭತ್ತದ ವೈವಿಧ್ಯಮಯ ತಳಿ ಬೆಳೆದ ಸಾಧಕ ನಾಗರಾಜ ನಾಯ್ಕ ಕಾಗಲ ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಕುಮಟಾ ಬಿಜೆಪಿ ಮಂಡಲಾಧ್ಯಕ್ಷರಾದ ಗಣಪತಿ ಹೆಗಡೆ, ಕುಮಾರ ಭಟ್, ಮಾಜಿ ಜಿ.ಪಂ. ಸದಸ್ಯ ಗಜಾನನ ಪೈ, ಡಾ. ಜಿ.ಜಿ. ಹೆಗಡೆ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಎಲ್ಲಾ ತಾಲೂಕಿನ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಇದ್ದರು. ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಷ್ಣ್ಣುಮೂರ್ತಿ ಹೆಗಡೆ ವಂದಿಸಿದರು.

ಬಾಕ್ಸ್…..

ರೈತಮೋರ್ಚಾ ಕಾರ್ಯಕ್ರಮಕ್ಕೆ ಸಂಸದ ಕಾಗೇರಿ ಶ್ಲಾಘನೆ

ಬಿಜೆಪಿ ರೈತ ಮೋರ್ಚಾ ಉತ್ತರ ಕನ್ನಡ ಘಟಕವು ಇಂತಹ ಉತ್ತಮ ಕಾರ್ಯಾಗಾರ ಆಯೋಜಿಸಿರುವುದು ಶ್ಲಾಘನೀಯ. ಸಾವಯವ ಕೃಷಿಯಲ್ಲಿ ಅದ್ಭುತ ಇಳುವರಿ ಪಡೆದು ಸಾಧನೆ ಮಾಡಿದ ಪ್ರಗತಿಪರ ಕೃಷಿಕ ಎನ್.ಡಿ. ಹೆಗಡೆಯವರನ್ನು ಹಾಗೂ ಜಿಲ್ಲೆಯ ವಿವಿಧ ಕೃಷಿ ಸಾಧಕರನ್ನು ಸನ್ಮಾನಿಸಿ ಗೌರವಿಸಿರುವುದು ಇತರ ರೈತರಿಗೆ ದೊಡ್ಡ ಮಾದರಿಯಾಗಿದೆ.

– ವಿಶ್ವೇಶ್ವರ ಹೆಗಡೆ ಕಾಗೇರಿ,
ಸಂಸದರು

ಊಟದಿಂದ ಬಂತು ರೋಗ, ಮಾತಿನಿಂದ ಬಂತು ಜಗಳ

ನಾವು ಸೇವಿಸುವ ಇಂದಿನ ಆಹಾರ ಪದ್ಧತಿಯಿಂದಲೇ ಬಹುತೇಕ ಆರೋಗ್ಯ ಸಮಸ್ಯೆಗಳು ನಮಗೆ ಬರುತ್ತಿವೆ. ರಾಸಾಯನಿಕಯುಕ್ತ ಆಹಾರದಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತಿದ್ದು, ಕ್ಯಾನ್ಸರ್‌ನಂತಹ ಹೆಮ್ಮಾರಿ ರೋಗಗಳು ಹೆಚ್ಚಾಗಲು ಕಾರಣವಾಗಿದೆ. ದೇಶದ ಪ್ರಧಾನಮಂತ್ರಿಯವರ ಕರೆಯಂತೆ ರೈತರು ನೈಸರ್ಗಿಕ ಹಾಗೂ ಸಾವಯವ ಕೃಷಿ ವಿಧಾನವನ್ನು ಅಳವಡಿಸಿಕೊಳ್ಳಲಿ ಎಂಬ ಆಶಯದಿಂದ ಈ ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

– ಅನಂತಮೂರ್ತಿ ಹೆಗಡೆ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರು