ಸುದ್ದಿ ಕನ್ನಡ ವಾರ್ತೆ
ಕಾರವಾರ: ತಾಲೂಕಿನ ಕಡವಾಡ ಗ್ರಾಮದ ಕಾಳಿ ನದಿಯ ಮೇಲಿದ್ದ ಸುಮಾರು 60ಕ್ಕೂ ಹೆಚ್ಚು ವರ್ಷಗಳ ಹಳೆಯ ಸೇತುವೆ ಸೋಮವಾರ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿದಿದೆ. ಹಲವು ದಶಕದಿಂದ ಜನರ ಓಡಾಟಕ್ಕೆ ನೆರವಾಗಿದ್ದ ಈ ಸೇತುವೆ ಇದೀಗ ನೆಲಸಮವಾಗಿ ರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.
ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಉದ್ಘಾಟಿಸಿದ್ದ ಈ ಸೇತುವೆ, ಕಡವಾಡ ಭಾಗದ ಪ್ರಮುಖ ಸಂಪರ್ಕ ಸೇತುವೆಯಾಗಿತ್ತು. ಕಾಲಕ್ರಮೇಣ ಸೇತುವೆ ದುರ್ಬಲಗೊಂಡ ಹಿನ್ನೆಲೆ ಸಾರ್ವಜನಿಕ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೂ ಈ ಸೇತುವೆ ಸ್ಥಳೀಯ ಮೀನುಗಾರರ ಬದುಕಿನ ಭಾಗವಾಗಿಯೇ ಉಳಿದಿತ್ತು. ನದಿಯ ನೀರಿನ ಹರಿವು ಮತ್ತು ಮೀನುಗಳ ಚಲನೆಯ ಕಾರಣ ಈ ಜಾಗ ಮೀನುಗಾರಿಕೆಗೆ ಅತ್ಯಂತ ಸೂಕ್ತ ಸ್ಥಳವೆಂದು ಪರಿಗಣಿಸಲಾಗುತ್ತಿತ್ತು. ಸ್ಥಳೀಯರ ಪ್ರಕಾರ, ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಸೇತುವೆ ಮೇಲೆ ಸಾಲಾಗಿ ನಿಂತು ಮೀನುಗಾರಿಕೆ ನಡೆಸುವುದು ಸಾಮಾನ್ಯ ದೃಶ್ಯವಾಗಿತ್ತು.
ಘಟನೆ ಬಳಿಕ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭದ್ರತಾ ದೃಷ್ಟಿಯಿಂದ ಸಾರ್ವಜನಿಕರು ಸೇತುವೆ ಸಮೀಪ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
