ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ನ್ಯೂ-ಟೌನಶಿಪ್, ಜೋಯಿಡಾ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ದಾಖಲಾತಿ ಆಂದೋಲನವನ್ನು ಉತ್ಸಾಹದಿಂದ ಹಮ್ಮಿಕೊಳ್ಳಲಾಯಿತು.
ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿ, ಶಾಲಾ ವಯಸ್ಸಿನ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸಿದರು. ಗುಣಮಟ್ಟದ ಶಿಕ್ಷಣ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.
ಪ್ರತಿ ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ದಾಖಲಾತಿ ಆಂದೋಲನ ನಡೆಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ಪೋಷಕರಿಗೆ ಮನವಿ ಮಾಡಲಾಯಿತು.
