ಸುದ್ದಿ ಕನ್ನಡ ವಾರ್ತೆ
ಶಿರಸಿ:ಶಿರಸಿ ನಗರದ ಯೂನಿಯನ್ ಪ್ರೌಢಶಾಲೆಯ ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್ ಅವರ ಎಸ್ಎಸ್ಎಲ್ಸಿ (SSLC) ಅಂಕಪಟ್ಟಿಯಲ್ಲಿದ್ದ ದೋಷವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸರಿಪಡಿಸಿದೆ. ದೋಷದ ವಿವರ: ಲೀಸಾ ಖಾನಮ್ ಅವರು ಎಲ್ಲಾ ಆರು ವಿಷಯಗಳ ಪರೀಕ್ಷೆಯನ್ನು ಬರೆದಿದ್ದರೂ, ಮಂಡಳಿಯು ಪ್ರಕಟಿಸಿದ ಫಲಿತಾಂಶದಲ್ಲಿ ಸಮಾಜ ವಿಜ್ಞಾನ ವಿಷಯಕ್ಕೆ ‘ಗೈರುಹಾಜರಿ’ (Absent) ಎಂದು ನಮೂದಿಸಿ ಅವರನ್ನು ‘ಫೇಲ್’ ಮಾಡಲಾಗಿತ್ತು. ಇದರಿಂದ ವಿದ್ಯಾರ್ಥಿನಿ ಹಾಗೂ ಪಾಲಕರಲ್ಲಿ ಗೊಂದಲ ಮತ್ತು ಆತಂಕ ಉಂಟಾಗಿತ್ತು. ತಕ್ಷಣವೇ ಈ ದೋಷ ಸರಿಪಡಿಸುವಂತೆ ಶಾಸಕ ಭೀಮಣ್ಣ ನಾಯ್ಕಗೆ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ಸ್ಪಂದಿಸಿದ ಶಾಸಕರು ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಒತ್ತಾಯಿಸಿದರು. ಶಾಸಕರ ಮನವಿಗೆ ತಕ್ಷಣ ಸ್ಪಂದಿಸಿದ ಪರೀಕ್ಷಾ ಮಂಡಳಿ, ಲೀಸಾ ಖಾನಮ್ ಅಂಕಪಟ್ಟಿಯಲ್ಲಿದ್ದ ದೋಷವನ್ನು ಸರಿಪಡಿಸಿ ಮರುಪ್ರಕಟಣೆ ಮಾಡಿದೆ. ಈ ಬಗ್ಗೆಯೂ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪರೀಕ್ಷಾ ಮಂಡಳಿಯು ತಾಂತ್ರಿಕ ದೋಷವನ್ನು ಸರಿಪಡಿಸಿದೆ. ಪರಿಷ್ಕೃತ ಫಲಿತಾಂಶ: ದೋಷ ನಿವಾರಣೆಯಾದ ನಂತರ, ಲೀಸಾ ಅವರಿಗೆ ಸಮಾಜ ವಿಜ್ಞಾನ ವಿಷಯದಲ್ಲಿ 97 ಅಂಕಗಳು ಲಭಿಸಿವೆ. ಇದರೊಂದಿಗೆ ಅವರು ಒಟ್ಟು 625 ಕ್ಕೆ 603 ಅಂಕಗಳನ್ನು (96.48%) ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಶಿರಸಿ SSLC ವಿದ್ಯಾರ್ಥಿನಿಯ ಫಲಿತಾಂಶದ ದೋಷ ಸರಿಪಡಿಸಿ ನ್ಯಾಯ ಒದಗಿಸಿದ ಪರೀಕ್ಷಾ ಮಂಡಳಿ
