Banner Ad

ಸುದ್ದಿ ಕನ್ನಡ ವಾರ್ತೆ
ಭಟ್ಕಳ: ತಾಲೂಕಿನ ಐತಿಹಾಸಿಕ ಶ್ರೀ ಚಿತ್ರಾಪುರ ಮಠ ಸಂಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಶ್ರೀ ಭವಾನಿಶಂಕರ ದೇವರ 165ನೇ ವರ್ಷದ ಮಹಾ ರಥೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ಬುಧವಾರ ನೆರವೇರಿತು. ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಸಾವಿರಾರು ಭಕ್ತರು ಈ ಭವ್ಯ ಕ್ಷಣಕ್ಕೆ ಸಾಕ್ಷಿಯಾದರು.

ಮಠದ ಪರಂಪರೆಯಂತೆ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ರಥಾರೋಹಣ ಪ್ರಕ್ರಿಯೆ ನಡೆಯಿತು.ಶ್ರೀ ಭವಾನಿಶಂಕರ ದೇವರ ಉತ್ಸವ
ಮೂರ್ತಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿದ ನಂತರ, ಭಕ್ತರು ಹಣ್ಣು-ಕಾಯಿ ಹಾಗೂ ರಥ ಕಾಣಿಕೆಗಳನ್ನು ಅರ್ಪಿಸಿ ಭಕ್ತಿ ಸಮರ್ಪಿಸಿದರು.

Banner Ad

ಸಂಜೆ 5:30ಕ್ಕೆ ಶ್ರೀ ಶಂಕರಾಶ್ರಮ ಸ್ವಾಮೀಜಿಗಳು ರಥವನ್ನೇರುತ್ತಿದ್ದಂತೆ ಸದ್ಯೋಜಾತ ಭಕ್ತರ ಹರ್ಷೋದ್ಘಾರ ಮುಗಿಲುಮುಟ್ಟಿತು. ಭಕ್ತಾದಿಗಳು ರಥಬೀದಿಯಲ್ಲಿ ರಥವನ್ನು ಎಳೆದು ಪುನೀತರಾದರು. ರಥವು ಸಂಚರಿಸುವ ಹಾದಿಯುದ್ದಕ್ಕೂ ಸ್ವಾಮೀಜಿಯವರು ಭಕ್ತರಿಗೆ ಪ್ರಸಾದ ವಿತರಣೆ ಮಾಡಿದ್ದು ವಿಶೇಷವಾಗಿತ್ತು. ರಥೋತ್ಸವಕ್ಕೆ ತಟ್ಟಿರಾಯ ಮತ್ತು ಚಂಡೆ ವಾದ್ಯಗಳ ನಿನಾದ ಹೆಚ್ಚಿನ ಮೆರುಗು ನೀಡಿತು.
ರಥೋತ್ಸವದ ಬಳಿಕ ಸಂಜೆ 6:30ಕ್ಕೆ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಧರ್ಮಸಭೆ ನಡೆಯಿತು. ಕಾರ್ಯಕ್ರಮವು ಶಾಂತಿಯುತವಾಗಿ ನಡೆಯಲು ಡಿವೈಎಸ್ಪಿ ಗಿರೀಶ ಬಿ. ಹಾಗೂ ಗ್ರಾಮೀಣ ಠಾಣೆಯ ಸಿಪಿಐ ವೆಂಕಟೇಶ್ ಎಸ್. ಮುರ್ನಾಲ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಈ ಧಾರ್ಮಿಕ ಮಹೋತ್ಸವದಲ್ಲಿ ಮಠದ ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ದೇಶದ ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

Banner Ad