ಸುದ್ದಿ ಕನ್ನಡ ವಾರ್ತೆ

ಶಿರಸಿ:ಅಂತರಾಷ್ಟ್ರೀಯ ಸಹಕಾರ ವರ್ಷ ೨೦೨೫ ಮತ್ತು ೪೪ನೇ ನಬಾರ್ಡ ಸ್ಥಾಪನಾ ದಿವಸದ ಅಂಗವಾಗಿ ಗ್ರಾಮೀಣಾಭಿವೃದ್ದಿ ಮತ್ತು ಸುಸ್ಥಿರ ಕೃಷಿ ಪದ್ದತಿಯಿಂದ ರಾಷ್ಟ್ರದ ಅಭಿವೃದ್ದಿಗೆ ಕಾರಣೀಕೃತ ಸಹಕಾರ ಕ್ಷೇತ್ರದ ಪ್ರಾಥಮಿಕ ಸಂಘಗಳ ವಿಭಾಗದಲ್ಲಿ ಹಣಕಾಸೇತರ ಚಟುವಟಿಕೆಗಾಗಿ ತಾಲೂಕಿನ ಭೈರುಂಬೆಯ ಹುಳಗೋಳ ಪ್ರಾಥಮಿಕ ಸಹಕಾರಿ ಸಂಘ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.

ಬೆಂಗಳೂರಿನ ನಬಾರ್ಡ ಮುಖ್ಯ ಕಚೇರಿಯಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಆರ್ ಎಸ್ ಭಟ್ಟ ನಿಡಗೋಡು ಮತ್ತು ಮುಖ್ಯಕಾರ್ಯನಿರ್ವಾಹಕ ಜಿ ಎಂ.ಹೆಗಡೆ ಮಾತ್ನಳ್ಳಿ ಮತ್ತು ಕೆಡಿಸಿಸಿ ಬ್ಯಾಂಕ್ ಹಿರಿಯ ಅಧಿಕಾರಿ ಪಿ ಜಿ ದೀಕ್ಷಿತ ಹಾಜರಿದ್ದು ಪ್ರಶಸ್ತಿ ಸ್ವೀಕರಿಸಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ, ನಬಾರ್ಡ ಮ್ಯಾನೇಜಿಂಗ್ ಡೈರೆಕ್ಟರ್ ಸುರೇಂದ್ರ ಬಾಬು, ಆರ್‌ಬಿಐ ರೀಜನಲ್ ಡೈರೆಕ್ಟರ್ ಸುಶಾಲಿ ಸಿಂಗ್ ಗುಪ್ತಾ, ಕೆನರಾ ಬ್ಯಾಂಕ್ ನಿರ್ದೇಶಕ ಭವಿಂದ್ರ ಕುಮಾರ ಉಪಸ್ಥಿತರಿದ್ದರು.
ಸಂಘದ ಕಾರ್ಯಚಟುವಟಿಕೆಗಳು…
ಭೈರುಂಬೆ ಸಹಕಾರ ಸಂಘವು ಹಣಕಾಸಿನ ಹೊರತಾಗಿ ೩೦ ವಿವಿಧ ಉದ್ದೇಶದ ಚಟುವಟಿಕೆ ಕೈಗೊಂಡಿದ್ದು, ಪ್ರಮುಖವಾಗಿ ಕಿರಾಣಿ, ಜವಳಿ, ಕಟ್ಟಡ ವಿಭಾಗ, ಸ್ಠೇಷನರಿ, ಕೃಷಿ ಸಾಮಗ್ರಿಗಳು, ಕೃಷಿ ನರ್ಸರಿಗಳ ಮೂಲಕ ಸುಮಾರು ೧೨ ಕೋಟಿ ರೂ. ಮಾರಾಟ ವ್ಯವಹಾರ ಕೈಗೊಂಡಿದೆ. ೩ ಲಾರಿ, ೩ ಟ್ರಾಕ್ಟರ್, ೨ ಪಿಕ್ ಅಪ್, ೧ಹಿಟಾಚಿ ಮೂಲಕ ಸದಸ್ಯರ ಕೃಷಿ ಅಭಿವೃದ್ದಿಗೆ ಕಾರ್ಯನಿರ್ವಹಿಸುತ್ತಿದೆ. ೧೦ಕ್ಕೂ ಹೆಚ್ಚು ಕೃಷಿ ಯಂತ್ರ ಸೇವೆಗೆ ಒದಗಿಸಲಾಗಿದೆ.
ಮುಖ್ಯವಾಗಿ ಸದಸ್ಯರ ಆರ್ಥಿಕ ಬೆಳವಣಿಗೆಗೆ ೧೦೦೦ಕ್ಕೂ ಹೆಚ್ಚು ಜೇನು ಪೆಟ್ಟಿಗೆ ಸ್ಥಾಪಿಸಿ, ಸಂಘದ ಮೂಲಕವೇ ನಿರ್ವಹಿಸಲಾಗುತ್ತಿದೆ. ಸದಸ್ಯರಿಂದ ಜೇನು ತುಪ್ಪವನ್ನು ಖರೀದಿಸಿ ಮಾರುಕಟ್ಟೆ ಮಾಡುತ್ತಿದೆ. ಅಲ್ಲದೇ ಸಂಘವು ಮಿಶ್ರ ಬೆಳೆಗೆ ಆಯಾ ಕಾಲಕ್ಕೆ ಸದಸ್ಯರಿಗೆ ಉತ್ತೇಜನ ನೀಡುತ್ತಿದೆ. ಕಳೆದ ಹಲವಾರು
ವರ್ಷಗಳಿಂದ ಕಾಳುಮೆಣಸು ಮತ್ತು ಕಾಫಿ ಬೆಳೆ ಕುರಿತು ವಿಶೇಷ ಪ್ರಯತ್ನ ಮಾಡಲಾಗುತ್ತಿದೆ. ಆಯಾ ಕಾಲಕ್ಕೆ ಸಂಘದ ವ್ಯಾಪ್ತಿಯ ಹತ್ತು ಗ್ರಾಮದ ಸದಸ್ಯರ
ಆಶೋತ್ತರ ಒದಗಿಸುತ್ತಾ ಬಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು ಎಂದು ಸಂಘದ ಅಧ್ಯಕ್ಷ ವಿ ಎಸ್ ಹೆಗಡೆ ಕೆಶಿನಮನೆ ತಿಳಿಸಿದ್ದಾರೆ.