ಸುದ್ದಿ ಕನ್ನಡ ವಾರ್ತೆ
ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನೂತನವಾಗಿ ಸ್ಥಾಪಿಸಿರುವ ಡಾ.ಯು. ಚಿತ್ತರಂಜನ್ ದತ್ತಿನಿಧಿ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಗಣೇಶ ಇಟಗಿ ಆಯ್ಕೆಯಾಗಿದ್ದಾರೆ ಎಂದು ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ತಿಳಿಸಿದ್ದಾರೆ.
ಸಂಘದ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಭಟ್ ಅವರು ಡಾ. ಯು. ಚಿತ್ತರಂಜನ್ ಹೆಸರಿನಲ್ಲಿ ದತ್ತಿನಿಧಿಯನ್ನು ಸ್ಥಾಪಿಸಬೇಕೆಂದು ಇಚ್ಛಿಸಿ ಜಿಲ್ಲಾಧ್ಯಕ್ಷ ಜಿ. ಸುಬ್ರಾಯ ಭಟ್ಟರೊಂದಿಗೆ ಚರ್ಚಿಸಿ ಪ್ರಶಸ್ತಿಗೆ ಮೂಲನಿಧಿಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವರ್ಷದಿಂದ ಡಾ. ಯು. ಚಿತ್ತರಂಜನ್ ಹೆಸರಿನಲ್ಲಿ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಹಿರಿಯ ಪತ್ರಕರ್ತ ಗಣೇಶ ಇಟಗಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಪ್ರಸ್ತುತ ವಿಜಯ ಕರ್ನಾಟಕದಲ್ಲಿ ಸಹಾಯಕ ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ತಮ್ಮ ಕಾಲೇಜಿನ ದಿನಗಳಿಂದಲೇ ಶಿರಸಿಯ ಧ್ಯೇಯನಿಷ್ಠ ಪರ್ತಕರ್ತ ಪತ್ರಿಕೆಗೆ ವರದಿಗಳನ್ನು ಕಳುಹಿಸುವ ಮೂಲಕ ಪತ್ರಿಕಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ೧೯೯೫ ರಿಂದ ಭಟ್ಕಳದಲ್ಲಿ ಪೂರ್ಣಪ್ರಮಾಣದ ವರದಿಗಾರರಾಗಿ ಕಾರ್ಯನಿರ್ವಹಿಸಿದ ಇವರು ಭಟ್ಕಳ ದುಷ್ಟರ ಅಡಗುತಾಣ ಎನ್ನುವ ವರದಿಯನ್ನು ಪ್ರಕಟಿಸಿ ಆಡಳಿತದ ಕಣ್ಣುತೆರೆಸುವ ಪ್ರಯತ್ನ ಮಾಡಿದ್ದರು.
ಭಟ್ಕಳದಿಂದ ಬೆಳ್ತಂಗಡಿವರೆಗೆ ಕಾಡಿನಲ್ಲಿ ಬೆಳೆಯುತ್ತಿದ್ದ ಅಕ್ರಮ ಗಾಂಜಾ ಬೆಳೆ ಕುರಿತು ಸಚಿತ್ರ ವರದಿ ಪ್ರಕಟಿಸಿದ್ದರು. ಇವರ ವರದಿಗಳು ಭಟ್ಕಳದಲ್ಲಿ ಆ ಸಮಯದಲ್ಲಿ ನಡೆಯುತ್ತಿದ್ದ ಹಲವು ಸಮಾಜಘಾತುಕ ಕೃತ್ಯವನ್ನು ಅನಾವರಣ ಗೊಳಿಸಿದ್ದವು. ಗಣೇಶ ಇಟಗಿಯವರು ಡಾ. ಚಿತ್ತರಂಜನ್ ಅವರ ಜೊತೆಗೆ ಹತ್ತಿರದ ಒಡನಾಡಿಯಾಗಿದ್ದರು.
ಕಳೆದ ೩೩ ವರ್ಷದಲ್ಲಿ ೧೧ ಸಂಪಾದಕರ ಅಡಿಯಲ್ಲಿ ೧೧ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿ ಅಪಾರ ಅನುಭವ ಪಡೆದುಕೊಂಡ ಇವರು ೨೦೦೧ರಿಂದ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಸಿ ಪ್ರಸ್ತುತ ಸಹಾಯಕ ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗಣೇಶ ಇಟಗಿಯವರು ವಿದ್ಯಾರ್ಥಿ ದೆಸೆಯಿಂದಲೂ ಕೈಗಾ, ಬೇಡ್ತಿ, ಅಘನಾಶಿನಿ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ವಿಶೇಷ.
ಡಾ. ಯು. ಚಿತ್ತರಂಜನ್ ಹೆಸರಿನಲ್ಲಿ ಆರಂಭಿಸಲಾದ ದತ್ತಿನಿಧಿ ಪ್ರಶಸ್ತಿಯನ್ನು ಗಣೇಶ ಇಟಗಿ ಪ್ರಥಮವಾಗಿ ಸ್ವೀಕರಿಸಲಿದ್ದು ಜುಲೈ ೧ ರಂದು ಶಿರಸಿಯ ಟಿಎಂಎಸ್ ಸಭಾಭವನದಲ್ಲಿ ಆಯೋಜನೆಗೊಂಡ ಜಿಲ್ಲಾ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ ತಿಳಿಸಿದ್ದಾರೆ.