ಸುದ್ಧಿಕನ್ನಡ ವಾರ್ತೆ
ಶಿರಸಿ: ಅವೈಜ್ಞಾನಿಕವಾಗಿ ಜಾರಿಗೆ ತರಲು ಉದ್ದೇಶಿಸಿರುವ ಅಘನಾಶಿನಿ ಮತ್ತು ಬೇಡ್ತಿ ನದಿ ತಿರುವು ಯೋಜನೆಯನ್ನು ಸರ್ಕಾರಗಳು ಕೈಬಿಡದಿದ್ದರೆ ಉತ್ತರಕನ್ನಡ ಜಿಲ್ಲೆಯ ಜನತೆ ಸಾಮೂಹಿಕವಾಗಿ ಚುನಾವಣೆಯನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲಿಯ ಮಠಾಧೀಶರಾದ ಶ್ರೀ ಶ್ರೀಮದ್ ಗಂಗಾಧರೇಂಧ್ರ ಸರಸ್ವತೀ ಮಹಾಸ್ವಾಮೀಜಿಗಳು ಸರ್ಕಾರವನ್ನು ಎಚ್ಚರಿಸಿದ್ದಾರೆ.
ಶಿರಸಿ ನಗರದ ಎಂಇಎಸ್ ಕಾಲೇಜು ಮೈದಾನದಲ್ಲಿ ಅಘನಾಶಿನಿ-ಬೇಡ್ತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಆಯೋಜಿಸಿದ್ದ ಜನಜಾಗೃತಿ ಬೃಹತ್ ಸಮಾವೇಶದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಅಘನಾಶಿನಿ ಮತ್ತು ಬೇಡ್ತಿ ಕಣಿವೆಗಳಲ್ಲಿ ಪ್ರಾಮಾಣಿಕವಾಗಿ ವೈಜ್ಞಾನಿಕ ಅಧ್ಯಯನ ನಡೆಸಿದರೆ ಈ ನದಿ ತಿರುವು ಯೋಜನೆ ತಾಂತ್ರಿಕ ಮತ್ತು ಪಾರಿಸರಿಕವಾಗಿ ಅಸಾಧ್ಯ ಎಂಬ ವರದಿ ಬರುವುದು ಖಚಿತ. ಇದರಿಂದಾಗಿ ಸರ್ಕಾರಗಳು ಯಾವತ್ತೂ ಕೂಡ ಯೋಜನೆಯನ್ನು ರೂಪಿಸುವಾಗ ಮೊದಲು ಪ್ರಾಮಾಣಿಕ ಮತ್ತು ವೈಜ್ಞಾನಿಕ ಚಿಂತನೆ ನಡೆಸಬೇಕು. ಅಧ್ಯಯನ ನಡೆಸುವಾಗ ವಿಜ್ಞಾನಿಗಳ ಮೇಲೆ ಯಾವುದೇ ರಾಜಕೀಯ ಅಥವಾ ಬಾಹ್ಯ ಪ್ರಭಾವ ಬೀರದಂತೆ ಸ್ವತಂತ್ರವಾಗಿ ಅಧ್ಯಯನ ನಡೆಸಬೇಕು. ಪಶ್ಚಿಮ ಘಟ್ಟಗಳ ಉಳಿವಿನ ಕುರಿತು ಪ್ರಾಮಾಣಿಕ ಪ್ರಯತ್ನ ನಡೆಸಿದಾಗ ಮಾತ್ರ ಮುಂದಿನ ಪೀಳಿಗೆಯ ಭವಿಷ್ಯ ಉತ್ತಮವಾಗಿರಲು ಸಾಧ್ಯ ಎಂದು ಸ್ವರ್ಣವಲ್ಲೀ ಶ್ರೀಗಳು ನುಡಿದರು.
ಮನುಷ್ಯರಿಗೆ ಈ ಭೂಮಿಯ ಮೇಲೆ ಬದುಕುವ ಹಕ್ಕಿದ್ದಂತೆಯೇ ನದಿಗಳಿಗೂ ಕೂಡ ಬದುಕುವ ಹಾಗೂ ಹರಿಯುವ ಹಕ್ಕು ಇದೆ. ಇಂತಹ ಹರಿಯುವ ನದಿಗಳ ಸಹಜ ಹರಿವಿಗೆ ಅದರಲ್ಲಿಯೂ ಪಶ್ಚಿಮ ಘಟ್ಟದ ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಅಡ್ಡಿಪಡಿಸುವುದು ಧಾರ್ಮಿಕವಾಗಿ ಹಾಗೂ ನೈತಿಕವಾಗಿ ತಪ್ಪು. ನದಿಗಳನ್ನು ನಾವು ನೀರಿನ ಮೂಲವಾಗಿ ನೋಡಬಾರದು. ನೀರಾವರಿ ಅಗತ್ಯ ಎಂಬುದು ಸರಿ. ಆದರೆ ಅದಕ್ಕಾಗಿ ಅಪಾರ ವೈವಿದ್ಯತೆಯ ನಾಶ ಅನಿವಾರ್ಯವಲ್ಲ. ಪರಿಸರಕ್ಕೆ ಹಾನಿಯಾಗದಂತೆ,ಕಾಡು ಮುಳುಗದಂತೆ ಅಂತಹ ಪರ್ಯಾಯಗಳತ್ತ ಸರ್ಕಾರ ಗಮನಹರಿಸಬೇಕು ಎಂದು ಸ್ವರ್ಣವಲ್ಲೀ ಶ್ರೀಗಳು ಸರ್ಕಾರಕ್ಕೆ ಸಲಹೆ ನೀಡಿದರು.
