ಸುದ್ಧಿಕನ್ನಡ ವಾರ್ತೆ
ದಾಂಡೇಲಿ: ಮಹಾಶಿವರಾತ್ರಿ ದಿನದಂದು ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ದೇವಾಲಯಗಳು ಮಾತ್ರವಲ್ಲದೆಯೇ ಗುಡ್ಡ-ಬೆಟ್ಟದ ಮೇಲಿರುವ ಪುರಾಣ ಪ್ರಸಿದ್ಧ ಮಹಾದೇವನ ಸ್ಥಾನಗಳಲ್ಲಿಯೂ ಕೂಡ ಮಹಾಶಿವರಾತ್ರಿಯಂದು ವಿಶೇಷ ಪೂಜೆ ಸಲ್ಲಿಸಲು ಜನಸಾಗರವೇ ಹರಿದು ಬರುತ್ತದೆ. ಇಂದು ನಾವು ಪ್ರಸಿದ್ಧ ಶೃದ್ಧಾ ಸ್ಥಾನ ದಾಂಡೇಲಿಯ ಸಿದ್ಧ ಗುಹೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಪಡೆದುಕೊಳ್ಳೋಣ.

ಸಿದ್ಧ ಗುಹೆಯು ಕರ್ನಾಟಕದ ದಾಂಡೇಲಿಯಿಂದ 24 ಕಿಮಿ, ಶಿರಸಿಯಿಂದ 93 ಕಿಮಿ, ಕಾರವಾರದಿಂದ 120 ಕಿಮಿ, ಗೋಕರ್ಣದಿಂದ 139 ಕಿಮಿ ದೂರದಲ್ಲಿದೆ. ಸಿದ್ಧ ಗುಹೆಯು ದಾಂಡೇಲಿಯಲ್ಲಿರುವ ನೈಸರ್ಗಿಕ ಗುಹೆಯಾಗಿದೆ. ಸಿದ್ಧ ಗುಹೆಯು ಪ್ರವಾಸಿ ಪ್ರಸಿದ್ಧಿಯನ್ನೂ ಹೊಂದಿದ ತಾಣವಾಗಿದೆ.
ದಾಂಡೇಲಿ ವನ್ಯಜೀವಿ ಅಭಯಾರಣ್ಯದ ಹೃದಯ ಭಾಗದಲ್ಲಿರುವ ಕವಳ ಸಿದ್ಧ ಗುಹೆಯು ಯುಗಗಳ ಹಿಂದೆ ಜ್ವಾಲಾಮುಖಿಯಿಂದ ರೂಪುಗೊಂಡಿದ್ದು ಎಂದೇ ಹೇಳಲಾಗುತ್ತದೆ. ಈ ಗುಹೆಯು ಐತಿಹಾಸಿಕ ಪ್ರಸಿದ್ಧಿ ಧಾರ್ಮಿಕ ಸ್ಥಳವಾಗಿದೆ.

ಸಿದ್ಧ ಗುಹೆಯೊಳಗಿನ ಶಿವಲಿಂಗದ ದರ್ಶನ ಪಡೆಯಲು ಸುಮಾರು 375 ಮೆಟ್ಟಿಲುಗಳನ್ನು ಏರಬೇಕು. ಈ ಗುಹೆಗೆ ತೆರಳಲು ಕಿರಿದಾದ ಸುರಂಗದ ಮೂಲಕವೂ ಸಾಗಬೇಕು. ಇದರಿಂದಾಗಿ ಈ ಸ್ಥಾನಕ್ಕೆ ತೆರಳುವವರು ಬ್ಯಾಟರಿಯನ್ನು ಕೊಂಡೊಯ್ಯಬಹುದಾಗಿದೆ.(One has to climb about 375 steps to get darshan of Shivlinga inside Siddha cave).
ಸಿದ್ಧ ಗುಹೆಯಲ್ಲಿರುವ ಶಿವಲಿಂಗವು ಸುಮಾರು 4 ಅಡಿ ಎತ್ತರವಿದ್ದು 4 ಅಡಿ ವ್ಯಾಸವನ್ನು ಹೊಂದಿದೆ. ಈ ಶಿವಲಿಂಗದ ಮೇಲೆ ಗುಹೆಯಲ್ಲಿ ಕೆಚ್ಚಲಿನ ಆಕಾರವಿದ್ದು ಅಲ್ಲಿಂದ ಶಿವಲಿಂಗದ ಮೇಲೆ ಸದಾ ನೀರು ಬೀಳುತ್ತಿರುತ್ತದೆ. ಮಹಾ ಶಿವರಾತ್ರಿಯಂದು ಈ ಗುಹೆಯಲ್ಲಿರುವ ಶಿವಲಿಂಗದ ಪೂಜೆಗೆ ಭಕ್ತಸಾಗರವೇ ಹರಿದುಬರುತ್ತದೆ.

ಶಿವಲಿಂಗದ ದರ್ಶನ ಪಡೆದು ಗುಹೆಯಿಂದ ಹೊರ ಬರುವಾಗ ಚಾರಣ ಅಧ್ಬುತ ಅನುಭವವನ್ನು ತಂದುಕೊಡುತ್ತದೆ. ಮೇಲಿಂದ ಇಳಿದುಬರುವಾಗ ಕಾಳಿ ನದಿಯು ಕೆಳಗಿನ ಕಣಿವೆಯ ಮೂಲಕ ಹಾದುಹೋಗುವ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಮಹಾಶಿವರಾತ್ರಿಯಂದು ಇಲ್ಲಿ ವಿಶೇಷ ಪೂಜೆ ನೆರವೇರುವುದರಿಂದ ಅಗತ್ಯವಾಗಿ ಇಲ್ಲಿ ಭೇಟಿ ನೀಡಿ ಶಿವನ ದರ್ಶನ ಪಡೆದುಕೊಳ್ಳಬಹುದಾಗಿದೆ. ಕವಳ ಗುಹೆಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಫೆಬ್ರವರಿ ಉತ್ತಮ ಸಮಯವಾಗಿದೆ.