Banner Ad

ಸುದ್ದಿ ಕನ್ನಡ ವಾರ್ತೆ
ಹೊನ್ನಾವರ: ತಾಲೂಕಿನ ಉಪ್ಪೋಣಿಯ ಗೋಡೌನ್ ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಹೊನ್ನಾವರ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣ ದಾಖಲಾದ ಕೇವಲ 12 ಗಂಟೆಗಳ ಒಳಗೆ ಇಬ್ಬರು ಆರೋಪಿಗಳನ್ನು ಬಂಧಿಸಿ, ಕದ್ದ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಫೆಬ್ರವರಿ 23 ರ ಬೆಳಗ್ಗೆ 10 ಗಂಟೆಯಿಂದ ಮಾರ್ಚ್ 4 ರ 2 ಗಂಟೆಯ ಮಧ್ಯಾಹ್ನದ ನಡುವಿನ ಅವಧಿಯಲ್ಲಿ ಉಪ್ಪೋಣಿಯಲ್ಲಿರುವ ಗೋಡೌನ್ ನಿಂದ ಕಳ್ಳರು ಕಳ್ಳತನ ಮಾಡಿದ್ದರು. ಒಟ್ಟು 89,000 ರೂ. ಮೌಲ್ಯದ ಹೊಸ ಹಾಗೂ ಹಳೆಯ ವಾಯರ್ ಬಂಡಲ್‌ಗಳು,ಫ್ಲವ‌ರ್ ಪಾಟ್ ಮತ್ತು ಫೈಬರ್ ಟ್ಯೂಬ್ ಲೈಟ್‌ಗಳನ್ನು ಕಳವು ಮಾಡಲಾಗಿತ್ತು.ಈ ಬಗ್ಗೆ ದೂರುದಾರರು ನೀಡಿದ ಮಾಹಿತಿಯ ಮೇರೆಗೆ, ಮಾರ್ಚ್ 16 ರಂದು ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Banner Ad

ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಆರೋಪಿಗಳ ಪತ್ತೆಗಾಗಿ ವಿಶೇಷ ಮತ್ತು ಅನುಭವಿ ಪೊಲೀಸರ ತಂಡವನ್ನು ರಚಿಸಿದ್ದರು. ಖಚಿತ ಮಾಹಿತಿಯ ಜಾಡು ಹಿಡಿದು ಹೊರಟ ತಂಡ, ಮಾರ್ಚ್ 16 ರಂದು ಹೊನ್ನಾವರ ತಾಲೂಕಿನ ದಾಸಗೋಡ ಸಂಶಿ ನಿವಾಸಿಗಳಾದ ಅಬ್ದುಲ್ ವಾಜೀದ್‌ ಅಬ್ದುಲ್ ಗಣಿ ಸಾಬ್ ಮತ್ತು ಅಪ್ತಾಬ್ ಮಹಮ್ಮದ್ ಸಾಬ್ ಎಂಬಿಬ್ಬರನ್ನು ವಶಕ್ಕೆ ಪಡೆದು,ವಿಚಾರಣೆ ನಡೆಸಿದ ವೇಳೆ ಆರೋಪಿಗಳು ತಾವು ಮಾಡಿದ ಕಳ್ಳತನದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತರಿಂದ ಒಟ್ಟು 65,000 ರೂ. ಬೆಲೆಬಾಳುವ ಕದ್ದ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಮ್.ಎನ್ ಹೆಚ್ಚುವರಿ ಎಸ್.ಪಿ ಜಿ. ಕೃಷ್ಣಮೂರ್ತಿ, ಭಟ್ಕಳ ಡಿವೈಎಸ್ಪಿ ಗಿರೀಶ ಬಿ. ಹಾಗೂ ಹೊನ್ನಾವರ ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಎಸ್. ಅವರ ಮಾರ್ಗದರ್ಶನದಲ್ಲಿ ನಡೆಸಲಾಗಿತ್ತು.

ತನಿಖಾ ಪಿಎಸ್‌ಐ ಮಹಾಂತೇಶ ವಾಲ್ಮೀಕಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಗಜಾನನ ನಾಯ್ಕ, ಮನೋಜ ಡಿ., ಮತ್ತು ರವಿ ನಾಯ್ಕ ಅವರು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ದೂರು ದಾಖಲಾದ ಅಲ್ಪಾವಧಿಯಲ್ಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣ ಬೇಧಿಸಿದ ಹೊನ್ನಾವರ ಪೊಲೀಸ್ ಠಾಣೆಯ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.

Banner Ad