ಸುದ್ದಿ ಕನ್ನಡ ವಾರ್ತೆ

ಸಾಗರ: ನಾಡಿನ ಪುಣ್ಯ ಕ್ಷೇತ್ರಗಳಲ್ಲೊಂದಾದ ತಾಲೂಕಿನ ವರದಪುರದ ಶ್ರೀಧರಾಶ್ರಮದಲ್ಲಿ ಡಿ. ೮ರ ಭಾನುವಾರದಿಂದ ದತ್ತ ಜಯಂತಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳುತ್ತಿದ್ದು, ಶ್ರೀಧರ ಸ್ವಾಮಿಗಳ ೧೧೬ನೇ ಜಯಂತಿ ಮಹೋತ್ಸವ ಡಿ. ೧೪ರ ಶನಿವಾರ ನಡೆಯಲಿದೆ.

ದತ್ತ ಜಯಂತಿ ಭಾಗವಾಗಿ ಪ್ರತಿದಿನ ಸದ್ಗುರು ಸಮಾಧಿಗೆ ಫಲ ಪಂಚಾಮೃತ ಸಹಿತ ಏಕಾದಶ ರುದ್ರ, ಪುರುಷಸೂಕ್ತ ಅಭಿಷೇಕಪೂರ್ವಕ ಕಲ್ಪೋಕ್ತ ಮಹಾಪೂಜೆ, ಪಾರಾಯಣಗಳು, ಶ್ರೀದತ್ತ ಮಂತ್ರ, ಶ್ರೀಗುರು ಮಂತ್ರಗಳ ಜಪಾನುಷ್ಠಾನ ನಡೆಯಲಿವೆ.

ಡಿ. ೮ರಂದು ಶ್ರೀಗುರು ಗಣಪತಿ ಪೂಜನ, ಪುಣ್ಯಾಹ, ಪಂಚಗವ್ಯ ಪ್ರಾಯಶ್ಚಿತ್ತ ಪೂರ್ವಕ ಋತ್ವಿಗ್ವರಣ, ಗಣಪತಿ ಉಪನಿಷತ್ ಹವನ ನಡೆಯಲಿದೆ.

೯ರಂದು ಅತಿ ವಿಷ್ಣು ಯಾಗ, ೧೦ರಂದು ಗೋ ಸೂಕ್ತ ಹವನ, ೧೧ರಂದು ಗೀತಾ ಜಯಂತಿ ನಿಮಿತ್ತ ಸಾಮೂಹಿಕ ಭಗವದ್ಗೀತಾ ಪಠಣ, ಪ್ರವಚನ, ೧೨ರಂದು ಅನ್ನಸೂಕ್ತ ಹವನ, ೧೩ರಂದು ದಕ್ಷಿಣಾಮೂರ್ತಿ ಹವನ ನಡೆಯಲಿವೆ. ೧೨ರಿಂದ ೧೩ರವರೆಗೆ ಪ್ರತಿ ದಿನ ಸಂಜೆ ಹಾಗೂ ೧೪ರ ಮಧ್ಯಾಹ್ನ ಪಾಲಕೀ ಉತ್ಸವ ಹಾಗೂ ಅಷ್ಟಾವಧಾನ ಸೇವೆ ನಡೆಯಲಿವೆ.

೧೪ರಂದು ಶ್ರೀದತ್ತ ಮಂತ್ರ ಮತ್ತು ಶ್ರೀಗುರುಮಂತ್ರಗಳಿಂದ ಹವನ, ಸತ್ಯದತ್ತವ್ರ ಪೂಜೆ, ಸದ್ಗುರು ಸಮಾಧಿಗೆ ಶತರುದ್ರಾಭಿಷೇಕ, ಕಲ್ಪೋಕ್ತ ಮಹಾಪೂಜೆ ನಡೆಯಲಿದೆ. ೧೫ರಂದು ವಿವಿಧ ಹವನಗಳ ಪೂರ್ಣಾಹುತಿ ನಡೆಯಲಿವೆ ಎಂದು ವರದಪುರದ ಶ್ರೀಧರ ಸೇವಾ ಮಹಾಮಂಡಲ ಪ್ರಕಟಣೆಯಲ್ಲಿ ತಿಳಿಸಿದೆ.