ಸುದ್ದಿ ಕನ್ನಡ ವಾರ್ತೆ
ಶಿರಸಿ: ಶ್ರೀ ಮಾರಿಕಾಂಬಾ ದೇವಿಯ ಕಳೆದ ಜಾತ್ರೆಗೆ ಸಂಬಂಧಿಸಿ ಜಾತ್ರಾ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನವೆಂದು ಶಾಸಕ ಭೀಮಣ್ಣ ಅವರ ಮನವಿ ಮೇರೆಗೆ ಯಾವುದೇ ಹಣ ರಾಜ್ಯ ಸರಕಾರದಿಂದ ಬಂದಿಲ್ಲ, ಜಾತ್ರೆಗೆಂದು ಬರಬೇಕಿದ್ದ 5 ಕೋಟಿ ಹಣವೇ ಮಂಗಮಾಯವಾಗಿದೆ. ಬದಲಾಗಿ 3.5 ಕೋಟಿ ರೂಪಾಯಿ ಹಣ ಬಂದಿದೆ ಎಂದು ಕಾಂಗ್ರೆಸಿನವರು ಸುಳ್ಳು ಹೇಳುವುದರ ಮೂಲಕ ಕ್ಷೇತ್ರದ ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ಒಂದು ವೇಳೆ ಜಾತ್ರೆಗೆಂದು ಬಿಡುಗಡೆಯಾದ ವಿಶೇಷ ಅನುದಾನದಲ್ಲಿ ಸಿದ್ದಾಪುರದಲ್ಲಿನ ವಿವಿಧ ಕಾಮಗಾರಿಗಾಗಿ 3 ಕೋಟಿ ಅನುದಾನ ವ್ಯಯಿಸುತ್ತಾರೆಂದರೆ ಅದು ಹೇಗೆ ಸಾಧ್ಯವಾದೀತು ? ಇದು ನಾವೆಲ್ಲರೂ ನಂಬಿರುವ ಶ್ರೀ ಮಾರಿಕಾಂಬಾ ದೇವಿಗೆ ಅಪಚಾರ ಮಾಡಿದಂತಲ್ಲವೇ ? ಸಿದ್ದಾಪುರಕ್ಕೆ ಬಂದಿರುವ ಅನುದಾನವೇ ಬೇರೆ. ಕಳೆದ ಜಾತ್ರೆಗೆಂದು 5 ಕೋಟಿ ವಿಶೇಷ ಅನುದಾನ ತರುವುದರಲ್ಲಿ ಭೀಮಣ್ಣ ನಾಯ್ಕ ಸೋತಿದ್ದಾರಾ ಅಥವಾ ಬೇರೆ ವಿಭಾಗದಡಿಯಲ್ಲಿ ಹಣವನ್ನು ತೆಗದು ತಿಂದಿದ್ದಾರಾ ಎಂಬುದನ್ನು ಸ್ಪಷ್ಟಪಡಿಸಲಿ ಜೊತೆಗೆ ಈಗಲಾದರೂ ಸತ್ಯ ಒಪ್ಪಿಕೊಂಡು ಶ್ರೀ ಮಾರಿಕಾಂಬಾ ದೇವಿಗೆ ತಪ್ಪುಗಾಣಿಕೆ ಅರ್ಪಿಸಬೇಕು ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ.
ಅವರು ಮಂಗಳವಾರ ನಗರದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದರು. ಕಳೆದ ಜಾತ್ರೆಗೆಂದು ಶಾಸಕ ಭೀಮಣ್ಣನವರು 5 ಕೋಟಿ ಕೇಳಿದ್ದರು. ಅದರಲ್ಲಿ 3.5 ಕೋಟಿ ರೂಪಾಯಿ ರಾಜ್ಯ ಸರಕಾರದಿಂದ ಬಿಡುಗಡೆಯಾಗಿದೆ ಎಂದು ಕಾಂಗ್ರೆಸಿನವರು ಹೇಳಿದ್ದಕ್ಕೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು. ಕಳೆದ ಜಾತ್ರೆಗೆಂದು ಶಾಸಕ ಭೀಮಣ್ಣನವರು 5 ಕೋಟಿ ರೂಪಾಯಿ ಅನುದಾನ ತಂದಿದ್ದಾರೆ ಎಂದು ಕಾಂಗ್ರೆಸಿನವರು ಪತ್ರಿಕಾ ಹೇಳಿಕೆ ನೀಡಿದ್ದರು, ಜಾಹಿರಾತು ಕೊಡುವುದರ ಜೊತೆಗೆ ಪ್ಲೆಕ್ಸಗಳನ್ನೂ ಹಾಕಿದ್ದರು. ಆದರೆ ಆರ್ಟಿಐ ಮೂಲಕ ಜಾತ್ರಾ ಅನುದಾನ ಬಂದಿಲ್ಲವೆಂಬುದು ಸಾರ್ವಜನಿಕವಾಗಿದೆ. ಜೊತೆಗೆ ನಗರ ಸಭೆ ಅಧ್ಯಕ್ಷರೂ ಸಹ ಅನುದಾನ ಬಂದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ 5 ಕೋಟಿ ಬಂದಿದ್ದಾದರೆ, 3.5 ಕೋಟಿ ಹೊರತಾಗಿ ಉಳಿದ 1.5 ಕೋಟಿ ಯಾರು ತಿಂದರು ಎಂಬ ಪ್ರಶ್ನೆಗೆ ಶಾಸಕರು ಉತ್ತರ ನೀಡಬೇಕು ಎಂದರು.
ಪ್ರದೀಪ ಶೆಟ್ಟಿ ಲೋಕಲ್ ಆದರೆ, ನಾನು ಇಂಟರ್ ನ್ಯಾಷನಲ್:
ಮಾಜಿ ನಗರಸಭೆ ಅಧ್ಯಕ್ಷರಾದ ಪ್ರದೀಪ ಶೆಟ್ಟಿಯವರು ಶಿಕ್ಷಿತರು. ಯಾರ ಬಳಿ ಹೇಗೆ ಮಾತನಾಡಬೇಕು ಎಂಬುದನ್ನು ಕಲಿತುಕೊಂಡರೆ ಒಳ್ಳೆಯದು. ನಿಮ್ಮ ಯಾವ ಗೊಡ್ಡು ಬೆದರಿಕೆಗೆ ನಾನು ಜಗ್ಗುವವನಲ್ಲ, ನೀವು ಲೋಕಲ್ ಆದರೆ ನಾನು ಇಂಟರ್ ನ್ಯಾಷನಲ್. ಅಧಿಕೃತ ದಾಖಲೆ ಇಲ್ಲದೇ ನಾನು ಯಾವ ಆರೋಪವನ್ನು ಮಾಡುವುದಿಲ್ಲ. ಜನರ ಹಿತಕ್ಕಾಗಿ ಹೋರಾಟ, ಹೊಡೆದಾಟ ಎಲ್ಲದಕ್ಕೂ ಸಿದ್ಧವಾಗಿಯೇ ಈ ಕ್ಷೇತ್ರಕ್ಕೆ ಬಂದಿದ್ದೇನೆ. ಈ ಅವಾಜ್ ಹಾಕುವುದನ್ನೆಲ್ಲ ನನ್ನ ಹತ್ರ ಇಟ್ಟುಕೊಳ್ಳಬೇಡಿ. ನಿಮ್ಮ ಗಣೇಶ ನಗರದ ರಸ್ತೆಯನ್ನು ಅಗೆದು ಹಾಕಿ ತಿಂಗಳುಗಟ್ಟಲೇ ಆಗಿದೆ. ಅಲ್ಲಿಯ ಜನತೆ ನಿತ್ಯ ಕಣ್ಣೀರಿನ ಗೊಳು ಹಾಕುತ್ತಿದ್ದಾರೆ. ಪ್ರಶ್ನೆ ಮಾಡಿದವರಿಗೆ ಆವಾಜ್ ಹಾಕುವುದನ್ನು ಬಿಟ್ಟು ಮತ ನೀಡಿದ ಜನತೆಯ ಕೆಲಸ ಮಾಡಿ ಎಂದು ನೇರವಾಗಿ ಎಚ್ಚರಿಕೆ ನೀಡಿದರು.
ಶಾಸಕ ಭೀಮಣ್ಣನವರ ಮಾತನ್ನು ಪಾರೆಸ್ಟ್ ಗಾರ್ಡ್ ಸಹ ಕೇಳುತ್ತಿಲ್ಲ:
ಕ್ಷೇತ್ರದ ಶಾಸಕರಾಗಿರುವ ಭೀಮಣ್ಣನವರ ಮಾತನ್ನು ಅಧಿಕಾರಿಗಳನ್ನು ಬಿಡಿ, ಒಬ್ಬ ಅರಣ್ಯ ಇಲಾಖೆಯ ಗಾರ್ಡ್ ಸಹ ಕೇಳುತ್ತಿಲ್ಲ. ರೈತರ ತೋಟವನ್ನು ನಾಶ ಮಾಡಿದ ಅಧಿಕಾರಿ ದರ್ಪದಿಂದ ಶಾಸಕರೆದುರೇ ಮಾತನಾಡುತ್ತಿದ್ಧರೆ, ಭೀಮಣ್ಣ ಮೌನದಿಂದಿರುತ್ತಾರೆ. ಅಧಿಕಾರಿಗಳ ಮೇಲಿನ ಹಿಡಿತವನ್ನು ಶಾಸಕರು ಕಳೆದುಕೊಂಡಿದ್ದಾರೆ. ಬದಲಾಗಿ ಇದರಲ್ಲಿ ಬಿಜೆಪಿಯವರು ರಾಜಕೀಯ ಮಾಡಬಾರದು ಎನ್ನುತ್ತಾರೆ. ಕರಾವಳಿ ಉತ್ಸವದ ವೇದಿಕೆಯಲ್ಲಿಯೇ ಜಿಲ್ಲೆಗೆ ಮಾರಕವಾದ ಡಿಸಿಎಂ ಬೇಡಿ-ಅಘನಾಶಿನಿ ಯೋಜನೆ ಜಾರಿ ಮಾಡ್ತೇವೆ ಎಂದಾಗಲೂ, ಪಕ್ಕದಲ್ಲಿದ್ದ ಕಾಂಗ್ರೆಸ್ ಶಾಸಕರಿಗೆ ಅದನ್ನು ವಿರೋಧಿಸುವ ಧೈರ್ಯವಿಲ್ಲ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡದಿದ್ಧರೆ ರಾಜೀನಾಮೆ ನೀಡುತ್ತೇನೆ ಎಂದಿರುವ ಸೈಲ್ ಮಾತಿನ ಬಗ್ಗೆ ಹೆಮ್ಮೆಯಿದೆ. ಆ ಗಟ್ಟಿತನವನ್ನು ನಮ್ಮ ಶಾಸಕರು ತೋರಲಿ ಎಂದು ಅವರು ಆಗ್ರಹಿಸಿದರು.
ಆಸ್ಪತ್ರೆಗೆ ವೈದ್ಯಕೀಯ ಉಪಕರಣ ತರುವ ವಿಚಾರದಲ್ಲಿ ಶಾಸಕರ ನಿಷ್ಕ್ರಿಯತೆ:
ಮಾಜಿ ಶಾಸಕರಾಗಿರುವ ಕಾಗೇರಿಯವರು ಕ್ಷೇತ್ರದ ಜನತೆಗಾಗಿ ತಂದಿದ್ದ ಆಸ್ಪತ್ರೆಯನ್ನು ಪೂರ್ಣಗೊಳಿಸಿ, ವೈದ್ಯಕೀಯ ಉಪಕರಣ ಖರೀದಿಗೆ ಟೆಂಡರ್ ಹಾಗು ತಜ್ಞ ವೈದ್ಯರ ನೇಮಕಾತಿ ಮಾಡಲು ಸರಕಾರವನ್ನು ಆಗ್ರಹಿಸಲು ಭೀಮಣ್ಣರಿಗೆ ಆಗಿಲ್ಲ. ಕಳೆದ ಒಂದೂವರೆ ವರ್ಷದಿಂದ ಆಸ್ಪತ್ರೆ ಕುಂಟುತ್ತಿದೆ. ಬಡವರಿಗೆ ಉಚಿತವಾಗಿ ದೊರೆಯುತ್ತಿದ್ದ ಸ್ಕ್ಯಾನಿಂಗ್, ಎಂಆರ್ಐ, ಸಿಟಿ ಸ್ಕ್ಯಾನ್, ಹಾರ್ಟ್ ಆಪರೇಷನ್ ಅಂತಹ ಸೌಲಭ್ಯಗಳಿಗೆ ಇಂದು ಲಜ್ಷಂತರ ಹಣವನ್ನು ಕ್ಷೇತ್ರದ ಜನ ವ್ಯಯಿಸಬೇಕಿದೆ. ಕನಿಷ್ಟಪಕ್ಷ ಶಾಸಕರಿಗೆ ಮಾನವೀಯತೆ, ಮತ ಹಾಕಿರುವ ಬಡವರ ಮೇಲಿನ ಕಳಕಳಿ ಇದ್ಧರೆ ಆಸ್ಪತ್ರೆಯನ್ನು ಜನಸೇವೆಗೆ ಲಭ್ಯವಾಗುವಂತೆ ಮಾಡಿ ಎಂದರು.
ನಾನೂ ರಾಜೀನಾಮೆಗೆ ಸಿದ್ಧ; ನೀವೂ ಬನ್ನಿ.. ಕಾಮಗಾರಿ ಪರ್ಸಂಟೇಜ್ ಲೆಕ್ಕ ಮಾಡೋಣ:
ಕಾಂಗ್ರೆಸಿನವರಿಗೆ ತಮ್ಮ ಶಾಸಕರ ಅವಧಿಯಲ್ಲಿ ಎಷ್ಟು ಕಾಮಗಾರಿ ಆಗಿದೆ ಎಂಬುದರ ಬಗ್ಗೆ ತಮಗೆ ವಿಶ್ವಾಸವಿಲ್ಲ. ನೀವು ಹೇಳಿರುವ ಸವಾಲನ್ನು ನಾನೂ ಸ್ವೀಕಾರ ಮಾಡುತ್ತೇನೆ. ನೀವು ಗುದ್ದಲಿ ಪೂಜೆ ಮಾಡಿರುವ ಎಲ್ಲ ಕಡೆಗೆ ನಾವೆಲ್ಲರೂ ಪತ್ರಿಕೆಯವರ ಜೊತೆಗೆ ಹೋಗೋಣ. ಅಲ್ಲಿ ಎಷ್ಟು ಗುಣಮಟ್ಟದಲ್ಲಿ, ಎಷ್ಟು ಪ್ರತಿಶತ ಕಾಮಗಾರಿ ನಡೆದಿದೆ ಎಂಬುದನ್ನು ಪರಿಶೀಲಿಸೋಣ. ಆಗ ಸತ್ಯ ಜನರೆದುರು ಬಯಲಾಗುತ್ತದೆ. ನಿಮ್ಮ ಸವಾಲಿಗೆ ನಾನೂ ಸಿದ್ಧನಿದ್ದೇನೆ ಎಂದರು.
ಕಣ್ಣೆದುರೇ ಮಗನ ಸಾವು ಕಂಡವನ ಕಣ್ಣೀರು:
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಗನನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಬಂದಿದ್ದೆ. ಆದರೆ ಇಲ್ಲಿ ವೆಂಟಿಲೇಟರ್ ಸೌಲಭ್ಯ ಇಲ್ಲದೇ, ಖಾಸಗಿ ಆಸ್ಪತ್ರೆಯಲ್ಲಿ ಒಂದು ವಾರಕ್ಕೆ 70 ಸಾವಿರದಷ್ಟು ಹಣ ಖರ್ಚಾಯಿತು. ಕೂಲಿ ಮಾಡುವ ನನ್ನ ಬಳಿ ಇನ್ನಷ್ಟು ಹಣ ಖರ್ಚು ಮಾಡುವ ಶಕ್ತಿ ಇರಲಿಲ್ಲ, ಹಾಗಾಗಿ ಪುನಃ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದೆ. ಅವರು ಇಲ್ಲಿ ಸೌಲಭ್ಯವಿಲ್ಲ ಎಂದರು. ಆಸ್ಪತ್ರೆಯಿಂದ ಮನೆಗೆ ಬಂದ ಒಂದು ದಿನದಲ್ಲಿ ಹೆತ್ತ ಮಗ ಶವವಾದ ಎಂದು ಶಿರಸಿ ತಾಲೂಕಿನ ಇಸಳೂರು ಸಮೀಪದ ಶಶಿಧರ ಗೌಡ ಪತ್ರಿಕಾಗೋಷ್ಟಿಯಲ್ಲಿ ತಮ್ಮ ಅಳಲನ್ನು ತೋಡಿಕೊಂಡರು.
ಬಿಜೆಪಿ ಗ್ರಾಮೀಣ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಜಾತ್ರೆಗೆ ತಂದಿದ್ದೇವೆ ಎಂದು ಹೇಳಿಕೊಂಡು, ಕಳೆದ ಜಾತ್ರೆಗೆ ಶಾಸಕರು 5 ಕೋಟಿ ವಿಶೇಷ ಅನುದಾನ ತಂದಿದ್ದಾರೆ ಎಂಬುದು ಶುದ್ಧ ಸುಳ್ಳು. ಈ ಬಾರಿಯಾದರೂ ಹಳೆಯ 5 ಕೋಟಿ ಜೊತೆಗೆ ಇನ್ನೂ ಐದು ಕೋಟಿ ಸೇರಿಸಿ 10 ಕೋಟಿ ರೂಪಾಯಿ ಹಣವನ್ನು ಶಾಸಕರು ಜಾತ್ರೆಯ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ತರಲಿ. ಅದರ ಜೊತೆಗೆ ಗ್ರಾಮೀಣ ಭಾಗದಲ್ಲಿ ಕೆಲ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ. ಈ ಕೂಡಲೇ ಆ ನಿಟ್ಟಿನಲ್ಲಿಯೂ ಸಹ ಶಾಸಕರು ಗಮನ ಹರಿಸಲಿ ಎಂದು ಅವರು ಆಗ್ರಹಿಸಿದರು.
ಮತ್ತೀಘಟ್ಟ ಪಂಚಾಯತ ನಾರಾಯಣ ಹೆಗಡೆ ಮಾತನಾಡಿ, ಗುದ್ದಲಿ ಪೂಜೆ ಮಾಡಿರುವ ಅನೇಕ ಕಾಮಗಾರಿಗಳು ಆರಂಭಗೊಂಡಿಲ್ಲ. ಶಾಸಕರು ಈ ರೀತಿ ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯ ತೋರುವುದು ಉಚಿತವಲ್ಲ ಎಂದರು.
ಪತ್ರಿಕಾಗೋಷ್ಟಿಯಲ್ಲಿ ನಿವೃತ್ತ ಸಾರಿಗೆ ಅಧಿಕಾರಿ ಜಿ.ಎಸ್.ಹೆಗಡೆ ಸೇರಿದಂತೆ ಇನ್ನಿತರರು ಇದ್ದರು.
ಕಾಂಗ್ರೆಸಿನವರ ಧಮಕಿ ರಾಜಕಾರಣಕ್ಕೆ ನಾನು ಬಗ್ಗುವುದಿಲ್ಲ. ಎಲ್ಲದಕ್ಕೂ ಸಿದ್ಧನಾಗಿಯೇ ಬಂದಿದ್ದೇನೆ. ಅಧಿಕೃತ ದಾಖಲೆ ಇಲ್ಲದೇ ಒಂದಕ್ಷರವೂ ನಾನು ಮಾತನಾಡುವುದಿಲ್ಲ. ಕಾಂಗ್ರೆಸಿಗರು ಅವಾಜ್ ಹಾಕುವುದನ್ನೆಲ್ಲ ನನ್ನ ಹತ್ತಿರ ಇಟ್ಟುಕೊಳ್ಳುವುದು ಬೇಡ. ಹುಟ್ಟು ಉಚಿತ, ಸಾವು ಖಚಿತ, ಭಯ ಇದ್ದಿದ್ದರೆ ರಾಜಕೀಯಕ್ಕೆ ಬರುತ್ತಿರಲಿಲ್ಲ, ನನ್ನನ್ನು ಹೆದರಿಸಲಿಕ್ಕೆ ಬರಬೇಡಿ ಇದೆ ಫೈನಲ್ ವಾರ್ನಿಂಗ್ ನಿಮಗೆ.
ಅನಂತಮೂರ್ತಿ ಹೆಗಡೆ, ಬಿಜೆಪಿ ಮುಖಂಡ
