ಕುಮಟಾ: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಬೆಣ್ಣೆ ಕಾಲೇಜು ಬಳಿಯ ರೈಲ್ವೆ ಹಳಿಗಳ ಸಮೀಪ ನಡೆದಿದೆ.
 ಹೆರವಟ್ಟಾದ ಗೌರೀಶ ಮಾದೇವ ಗೌಡ (35) ಸಾವಿಗೆ ಶರಣಾದ ಯುವಕನಾಗಿದ್ದಾನೆ.ಹೆರವಟ್ಟಾದ ಸಾಣಿಯಮ್ಮ ದೇವಸ್ಥಾನ ಬಳಿ ವಾಸವಾಗಿದ್ದ ಗೌರೀಶ ಗೌಡ ಕಟ್ಟಡಗಳಿಗೆ ಬಣ್ಣ ಬಡಿಯುವ ಕಾರ್ಮಿಕನಾಗಿದ್ದ. ದುಡಿದ ಬಹುಪಾಲು ಹಣವನ್ನು ಮದ್ಯ ವ್ಯಸನಕ್ಕಾಗಿ ವ್ಯಯಿಸುತ್ತಿದ್ದು, ಮನೆಯಲ್ಲಿ ಎಷ್ಟೇ ಹೇಳಿದರೂ ಆತ ಕುಡಿತದಿಂದ ಹೊರ ಬಂದಿರಲಿಲ್ಲ. ಇತ್ತೀಚೆಗೆ ಮಾನಸಿಕವಾಗಿ ಸಹ ಕುಗ್ಗಿದ್ದ ಆತ ಮಣಕಿ ಮೈದಾನದ ಪಕ್ಕದಲ್ಲಿರುವ ಬೆಣ್ಣೆ ಕಾಲೇಜಿನ ಬಳಿ ಹೋಗಿ ಅಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
  ಈ ವಿಷಯ ತಿಳಿದ ಆಟೋ ಚಾಲಕನಾಗಿರುವ ಮೃತನ ಸಹೋದರ ಲೋಕೇಶ ಮಾದೇವ ಗೌಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಜೀವನದಲ್ಲಿನ ಜಿಗುಪ್ಸೆಯಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆಯಿದೆ ಎಂದು ಲೋಕೇಶ್ ಗೌಡ ದೂರಿನಲ್ಲಿ ಉಲ್ಲೇಖಿಸಿದ್ದು, ಕುಮಟಾ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.