ಸುದ್ಧಿಕನ್ನಡ ವಾರ್ತೆ
ಆಷಾಢ ಏಕಾದಶಿಯ ಅಂಗವಾಗಿ ಪಾಂಡುರಂಗ ವಿಠ್ಠಲನ ದರ್ಶನಕ್ಕಾಗಿ ಲಕ್ಷಾಂತರ ಭಕ್ತಾದಿಗಳು ದೇಶದ ಮೂಲೆ ಮೂಲೆಯಿಂದ ಕಾಲ್ನಡಿಗೆಯಲ್ಲಿ ಪಂಡರಾಪುರ ತಲುಪಿದ್ದಾರೆ. ತಾಳ,ಮೃದಂಗ ನಾದ, ಹರಿನಾಮ ಘೋಷದೊಂದಿಗೆ ಪಂಡರಪುರದಲ್ಲಿ ಭಕ್ತರ ಮಹಾಪುರವೇ ಕಂಡುಬರುತ್ತಿದೆ.
ಪ್ರಸಕ್ತ ಆಷಾಢ ಏಕಾದಶಿಯಂದು ಸುಮಾರು 15 ಲಕ್ಷ ಭಕ್ತಾದಿಗಳು ಪಂಡರಪುರಕ್ಕೆ ಪಂಡುರಂಗನ ದರ್ಶನಕ್ಕೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಸಕ್ತ ವರ್ಷ ಸಂತ ಜ್ಞಾನೇಶ್ವರ ಮಹಾರಾಜರ 750 ನೇಯ ಜನ್ಮೋತ್ಸವವನ್ನು ಮಹಾರಾಷ್ಟ್ರದಲ್ಲಿ ಎಲ್ಲೆಡೆ ಆಚರಿಸಲಾಗುತ್ತಿದೆ. ಇದರಿಂದಾ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಆಷಾಢ ಏಕಾದಶಿಯಂದು ಹೆಚ್ಚಿನ ಸಂಖ್ಯೆಯಲ್ಲಿ ಕಾಲ್ನಡಿಗೆಯಲ್ಲಿ ಬಂದ ಪಾದಯಾತ್ರಿಗಳ ಸಂಖ್ಯೆ ಹೆಚ್ಚಾಗಿದೆ.
ಅಂತೆಯೇ ಸಂತ ತುಕಾರಾಮ ಮಹಾರಾಜರ 375 ನೇಯ ವೈಕುಂಠಗಮನ ವರ್ಷದ ಹಿನ್ನೆಯಲ್ಲಿ ಪಾದಯಾತ್ರಿಗಳ ಸಂಖ್ಯೆ ಹೆಚ್ಚಾಗಿದೆ ಎಂದೂ ಹೇಳಲಾಗುತ್ತಿದೆ. ಕಳೆದ ಎರಡು ದಿನಗಳ ಹಿಂದೆಯೇ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಂಡರಪುರಕ್ಕೆ ಬಂದು ತಲುಪಿದ್ದಾರೆ.
ಆಷಾಢ ಏಕಾದಶಿಯಂದು ಪಂಡರಪುರದಲ್ಲಿ ಚಂದ್ರಭಾಗದಲ್ಲಿ ಪವಿತ್ರಸ್ನಾನಕ್ಕೆ ಗರ್ದಿ ಕಂಡುಬರುತ್ತಿದೆ. ಪುಂಡಲೀಕ ಮಂದಿರ, ನಾಮದೇವ ಪಾಯರಿ, ಕಳಸ ದರ್ಶನ ಮಾಡಿ ಹೆಚ್ಚಿನ ಭಕ್ತಾದಿಗಳು ಪಂಡರಪುರದಲ್ಲಿಯೇ ಮುಕ್ಕಾಂ ಹೂಡಿದ್ದಾರೆ. ವಿಠ್ಠಲನ ದರ್ಶನಕ್ಕಾಗಿ ಸರತಿ ಸಾಲು ಗೋಪಾಲಪುರದ ವರೆಗೂ ತಲುಪಿದೆ. ಸಂತ ಜ್ಞಾನೇಶ್ವರ ಮಹಾರಾಜ, ಸಂತ ತುಕಾರಾಮ ಮಹಾರಾಜ, ಸಂತ ಸೋಪಾನದೇವ ಮಹಾರಾಜರ ಪಲ್ಲಕ್ಕಿ ಆಗಮನವಾಗುತ್ತಿದ್ದಂತೆಯೇ ಭಕ್ತಾದಿಗಳ ಗರ್ದಿ ಇನ್ನೂ ಹೆಚ್ಚಾಗಿದೆ.