ಸುದ್ಧಿಕನ್ನಡ ವಾರ್ತೆ
ಜಗತ್ ಪ್ರಸಿದ್ಧ ಧಾರ್ಮಿಕ ಸ್ಥಳ ಆಂಧ್ರಪ್ರದೇಶದ ತಿರುಪತಿ (Tirupati) ಕ್ಷೇತ್ರಕ್ಕೆ ಲಕ್ಷಾಂತರ ಜನ ಭಕ್ತಾದಿಗಳು ಭೇಟಿ ನೀಡುತ್ತಾರೆ. ದಿನವಿಡೀ ಕಾದು ವೆಂಕಟೇಶ್ವರನ ದರ್ಶನ ಪಡೆಯಲು ದೇಶದ ವಿವಿಧ ರಾಜ್ಯಗಳಿಂದ ಆಗಮಿಸುತ್ತಾರೆ. ಬೆಂಗಳೂರಿನಿಂದ ಕೆಲವೇ ಗಂಟೆಗಳ ಪ್ರಯಾಣದ ದೂರದಲ್ಲಿರುವುದರಿಂದ ಕರ್ನಾಟಕದಿಂದಲೂ ತಿರುಪತಿಗೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆ ಕರ್ನಾಟಕ ಸರ್ಕಾರವು ತಿರುಪತಿಗೆ ಹೋಗುವ ಕರ್ನಾಟಕದ ಭಕ್ತಾದಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಸರ್ಕಾರದಿಂದಲೇ ಹೊರ ರಾಜ್ಯದಲ್ಲಿ ಭಕ್ತಾದಿಗಳಿಗಾಗಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ.

 

ಈ ಬಗ್ಗೆ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ತಿರುಮಲದಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ಛತ್ರ ಮೈಸೂರು ಕಾಂಪ್ಲೆಕ್ಸ್  (Karnataka Chhatra Mysore Complex) “ಶ್ರೀ ಕೃಷ್ಣರಾಜೇಂದ್ರ ಒಡೆಯರ್ ಬ್ಲಾಕ್” ಕಲ್ಯಾಣ ಮಂಟಪವನ್ನು ರಾಮಲಿಂಗಾರೆಡ್ಡಿ ಉದ್ಘಾಟಿಸಿದ್ದಾರೆ. ತಿರುಮಲದಲ್ಲಿ ನಿರ್ಮಾಣವಾಗಿರುವ 36 ಕೊಠಡಿಗಳ ವಿಐಪಿ ಬ್ಲಾಕ್, ಕಲ್ಯಾಣಿ ಮತ್ತು ಕರ್ನಾಟಕ ಛತ್ರದ ದೇವಸ್ಥಾನದ ಉದ್ಘಾಟನೆ ಸೆಪ್ಟೆಂಬರ್‍ನಲ್ಲಿ ನಡೆಯಲಿದೆ. 36 ಸುಸಜ್ಜಿತ ಕೊಠಡಿಗಳ ವಿಐಪಿ ಬ್ಲಾಕ್ ಕಾಮಗಾರಿ ಈಗಾಗಲೇ ಬಹುತೇಕ ಪೂರ್ಣವಾಗಿದೆ. ಅಂತಿಮ ಹಂತದ ಕೆಲಸಗಳು ಪ್ರಗತಿಯಲ್ಲಿವೆ. ಸೆಪ್ಟೆಂಬರ್ ವೇಳೆಗೆ ಇದು ಪೂರ್ಣಗೊಳ್ಳಲಿದ್ದು ಆಗ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

 

ಕರ್ನಾಟಕ ಸರ್ಕಾರದಿಂದ ನಿರ್ಮಾಣಗೊಂಡಿರುವ ಈ 36 ಕೋಣೆಗಳ ವಿಐಪಿ ಬ್ಲಾಕ್, ಕಲ್ಯಾಣಿ ಮತ್ತು ದೇವಸ್ಥಾನದ ಉದ್ಘಾಟನೆಯೂ ನಡೆಯಲಿದೆ. ಈ ಮೂಲಕ ಬಹಳ ವರ್ಷಗಳ ಕರ್ನಾಟಕ ಭಕ್ತರ ಕನಸು ನನಸಾಗಲಿದೆ ಎಂದು ಹೇಳಿದ್ದಾರೆ. ಈ ಸೇವೆ ಪಡೆಯುವುದು ಹೇಗೆ? ಈ ಕಲ್ಯಾಣ ಮಂಟಪವು ಸುಮಾರು 500 ಆಸನಗಳ ಸಾಮಥ್ರ್ಯ ಹಾಗೂ 13 ಕೊಠಡಿಗಳನ್ನು ಒಳಗೊಂಡಿದೆ. ಕರ್ನಾಟಕದಿಂದ ಬಂದು ತಿರುಮಲದಲ್ಲಿ ಮದುವೆ, ನಾಮಕರಣ ಮೊದಲಾದ ಶುಭ ಸಮಾರಂಭಗಳನ್ನು ಆಯೋಜನೆ ಮಾಡುವ ಭಕ್ತರಿಗೆ ಈ ಕಲ್ಯಾಣ ಮಂಟಪ ಲಭ್ಯವಿರುತ್ತದೆ. ಶ್ರೀಕೃಷ್ಣ ರಾಜೇಂದ್ರ ಒಡೆಯರ್ ಕಲ್ಯಾಣ ಮಂಟಪ ನಿರ್ಮಾಣ ತಿರುಮಲಕ್ಕೆ ಆಗಮಿಸುವ ಕರ್ನಾಟಕದ ಭಕ್ತರ ಅನುಕೂಲತೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಕರ್ನಾಟಕದ ಭಕ್ತರು ಆನ್‍ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಂಡು ಈ ಸೇವೆಯನ್ನು ಪಡೆದುಕೊಳ್ಳಬಹುದು ಎಂದಿದ್ದಾರೆ.

ಇನ್ನು ಕೆಲವೇ ತಿಂಗಳಲ್ಲಿ ಈ ಕಲ್ಯಾಣ ಮಂಟಪದ ಜೊತೆಗೆ 36 ಕೋಣೆಗಳ ವಿಐಪಿ ಬ್ಲಾಕ್, ಕಲ್ಯಾಣಿ ಮತ್ತು ದೇವಸ್ಥಾನದ ವ್ಯವಸ್ಥೆ ಕೂಡ ಸಿಗಲಿದ್ದು, ರಾಜ್ಯ ಸರ್ಕಾರದಿಂದಲೇ ಈ ವ್ಯವಸ್ಥೆ ಇರುವುದರಿಂದ ಶುಭ ಸಮಾರಂಭಗಳನ್ನು ಸುಸೂತ್ರವಾಗಿ ನೆರವೇರಿಸಬಹುದಾಗಿದೆ.