ಸುದ್ಧಿಕನ್ನಡ ವಾರ್ತೆ
ತಿರುಪತಿ ತಿಮ್ಮಪ್ಪನ ಪ್ರಸಾದ ಲಡ್ಡು ತಯಾರಿಕೆ ಮಾಡಲು ಈ ಹಿಂದೆ ಕಲಬೆರಕೆ ತುಪ್ಪವನ್ನು ಪೂರೈಕೆ ಮಾಡಿದ್ದ ಘಟನೆಯು ಭಕ್ತಾದಿಗಳಲ್ಲಿ ಬೇಸರವನ್ನುಂಟು ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕಡೆಲವರನ್ನು ಬಂಧಿಸಲಾಗಿದೆ. ಕಲಬೆರಕೆ ತುಪ್ಪ ಪೂರೈಕೆ ಘಟನೆಯ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಇದೀಗ ಮಹತ್ವದ ನಿರ್ಧಾರ ಘೋಷಿಸಿದ್ದಾರೆ.

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ರವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತ ಮಹತ್ವದ ನಿರ್ಧಾರವನ್ನು ಹಂಚಿಕೊಂಡಿದ್ದಾರೆ. ತಿರುಪತಿ ಲಡ್ಡು ಕೇವಲ ಸಿಹಿ ತಿಂಡಿಯಲ್ಲ. ಇದು ಪವಿತ್ರವಾದ ಆಧ್ಯಾತ್ಮಿಕ ನೆಲೆ, ಇದು ಹಂಚಿಕೊಂಡಿರುವ ಭಾವನೆ. ಈ ಪ್ರಸಾದವನ್ನು ನಾವು ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಸಮಾನವಾಗಿ ವಿತರಿಸುತ್ತೇವೆ. ಇದು ಸಾಮೂಹಿಕ ನಂಬಿಕೆಯನ್ನೊಳಗೊಂಡಿದೆ, ಆಳವಾದ ನಂಬಿಕೆಯನ್ನು ಸಾಕಾರಗೊಳಿಸುತ್ತದೆ ಎಂದು ಪವನ್ ಕಲ್ಯಾಣ್ ರವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿವರ್ಷ ತಿರುಪತಿಗೆ ಸುಮಾರು ಎರಡೂವರೆ ಕೋಟಿ ಭಕ್ತರು ಭೇಟಿ ನೀಡುತ್ತಾರೆ. ಸನಾತನ ಧರ್ಮದವರ ಭಾವನೆಗಳಿಗೆ ಮತ್ತು ಆಚರಣೆಗಳಿಗೆ ಅಮಹಾಸ್ಯ ಮಾಡಿದಾಗ ಅದು ಕೇವಲ ನೋವುಂಟು ಮಾಡುವುದಿಲ್ಲ. ಇದು ಪ್ರಪಂಚದಾದ್ಯಂತ ಇರುವ ಭಕ್ತಾದಿಗಳ ನಂಬಿಕೆ ಮತ್ತು ಭಕ್ತಿಗೆ ಘಾಸಿಗೊಳಿಸುತ್ತದೆ ಎಂದು ಪವನ್ ಕಲ್ಯಾಣ್ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಸನಾತನ ಧರ್ಮವು ಅತ್ಯಂತ ಹಳೇಯ ಮತ್ತು ನಿರಂತರವಾಗಿ ವಿಕಸಿಸುತ್ತಿರುವ ನಾಗರೀಕತೆಗಳಲ್ಲಿ ಒಂದಾಗಿದೆ. ನಾವು ಸನಾತನ ಧರ್ಮ ಪರಿರಕ್ಷಣಾ ಮಂಡಳಿಯನ್ನು ಸ್ಥಾಪಿಸಲು ಇದು ಸಕಾಲವಾಗಿದೆ. ಶೀಘ್ರವೇ ಸನಾತನ ಪರಿರಕ್ಷಣಾ ಮಂಡಳಿಯನ್ನು ಸ್ಥಾಪಿಸಬೇಕಿದೆ ಎಂದು ಪವನ್ ಕಲ್ಯಾಣ್ ಕರೆ ನೀಡಿದ್ದಾರೆ.
ತಿರುಪತಿ ಲಡ್ಡು ಕಲಬೆರಕೆ ತುಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡವು ಕಲಬೆರಕೆ ತುಪ್ಪ ತಯಾರಿಸಲು ಬಳಸುವ ರಾಸಾಯನಿಕವನ್ನು ಪೂರೈಸಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಲಡ್ಡು ತಯಾರಿಕೆಗೆ ರಾಸಾಯನಿಕ ಬಳಕೆಯು ಧಾರ್ಮಿಕ ಭಾವನೆಗಳಿಗೆ ತೀವ್ರ ನೋವುಂಟುಮಾಡಿದೆ ಎಂದು ಆಂಧ್ರಪ್ರದೇಶ ಎಸ್ ಐಟಿ ಹೇಳಿದೆ.