ಸುದ್ದಿ ಕನ್ನಡ ವಾರ್ತೆ
ಬೈಲಹೊಂಗಲ-ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ನಗರ ಎರಡನೇ ಅಡ್ಡ ರಸ್ತೆಯಲ್ಲಿರುವ
ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳದ ಹಾಗೂ ಕೇಂದ್ರ ಬಸವ ಸಮಿತಿ ಆಶ್ರಯದಲ್ಲಿ
ಶಿಕ್ಷಕಿ ಗೋದಾವರಿ ಸೋಮನಗೌಡ ಪಾಟೀಲ (ಸವದಿ ) ಕುಟುಂಬವನ್ನು ಶಿಕ್ಷಕರ ದಿನಾಚಾರಣೆ
ಅಂಗವಾಗಿ ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ ರಾಷ್ಟ್ರೀಯ ಬಸವ ದಳದ ಬೈಲಹೊಂಗಲ ತಾಲ್ಲೂಕಿನ ಅಧ್ಯಕ್ಷರಾದ ವಿಜಯಲಕ್ಷ್ಮೀ ವಿರೂಪಾಕ್ಷಪ್ಪ
ತೋಟಗಿ ಮಾತನಾಡಿ, ಶರಣ ಪರಂಪರೆಯಲ್ಲಿ ಬದುಕು ಸಾಗಿಸುತ್ತಿರುವ ಶಿಕ್ಷಕಿಯು ಕವನ ರಚನೆ,
ಸಾಹಿತ್ಯಕ ಚಟುವಟಕೆಗಳನ್ನು ಮಾಡುತ್ತಿರುವದು ಸಮಾಜದ ಚಿಂತನೆಯನ್ನು ತೋರಿಸುತ್ತದೆ
ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ , ಬಸವ ಸಮಿತಿಯ ಹಿರಿಯ ನಿರ್ದೇಶಕ ಮೋಹನ ಬಸನಗೌಡ ಪಾಟೀಲ ಮಾತನಾಡಿ, ಗೋದಾವರಿ ಪಾಟೀಲ
ಅವರ ತಂದೆಯವರು ಬೈಲಹೊಂಗಲದ ಭಾಗದಲ್ಲಿ ಶಿಕ್ಷಣದ ಹರಿಕಾರರಾಗಿ ಆರು ದಶಕಗಳ ಹಿಂದೆ
ಬಿಜಾಪುರ ಹಾಗೂ ಕಿತ್ತೂರು ಸೈನಿಕ ಶಾಲೆಯ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಯ ಪ್ರಸಿದ್ಧ
ತರಬೇತುದಾರರಾಗಿ ಹಾಗೂ ಶಿಕ್ಷಣದ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದ ದಿ. ಸೋಮನಗೌಡ ಫಕೀರಗೌಡ
ಪಾಟೀಲ ಕುಸಲಾಪುರ ಮಾಸ್ತರ ಎಂದೇ ಪ್ರಸಿದ್ದರಾದ ಇವರು ಬೆಳಗಾವಿ ವಿಭಾಗದಲ್ಲಿ
ಸಾವಿರಾರು ವಿದ್ಯಾರ್ಥಿಗಳು ಸೈನಿಕ ಶಾಲೆಗಳಲ್ಲಿ ಪ್ರವೇಶವನ್ನು ಪಡೆದು ತಮ್ಮ
ಶಿಕ್ಷಣವನ್ನು ಮುಗಿಸಿ ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು
ಹೆಮ್ಮೆಯಾಗಿದೆ ಎಂದರು.

ಕನ್ನಡ ಜಾನಪದ ಪರಿಷತ್ತಿನ ಬೈಲಹೊಂಗಲ ತಾಲೂಕು ಘಟಕದ ಮಾಧ್ಯಮ ಪ್ರತಿನಿಧಿ ಮಹಾಂತೇಶ
ಮಲ್ಲಪ್ಪ ರಾಜಗೋಳಿ ಮಾತನಾಡಿ, ಹಲವಾರು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ
ಸಲ್ಲಿಸುತ್ತಿರುವ ಗೋದಾವರಿ ಸೋಮನಗೌಡ ಪಾಟೀಲ (ಸವದಿ) ಅವರು ಮಕ್ಕಳ ಮನಸ್ಸು ಅರಿತು
ಪಾಠ ಮಾಡುವದರೊಂದಿಗೆ ಸಮಾಜದಲ್ಲಿ ಕವಯಿತ್ರಿಯಾಗಿ, ಬರಹಗಾರರಾಗಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ, ನಿರ್ದೇಶಕರಾಗಿ,ಶಾಸಕರ ಮಾದರಿ
ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವದು ಹರ್ಷ ತಂದಿದೆ ಎಂದು ಹೇಳಿದರು.

ಬಯಲ ಬೆಳಕು ಡಾ. ಎಚ್. ತಿಪ್ಪೇಸ್ವಾಮಿ ಅವರ 85 ನೇ ಅಭಿನಂದನಾ ಗ್ರಂಥ ಮತ್ತು ವಚನ
ಸಾಹಿತ್ಯದ ಅನೇಕ ಕೃತಿಗಳನ್ನು ಶಿಕ್ಷಕ ದಂಪತಿಗಳಿಗೆ ನೀಡಿ ಸನ್ಮಾನಿಸಲಾಯಿತು. ಇದಕ್ಕೂ
ಮೊದಲು ಶ್ರಾವಣ ಮಾಸದ ನಿಮಿತ್ತ ಮನೆ ಮನೆಗೆ ಬಸವ ಜ್ಯೋತಿ ಕಾರ್ಯಕ್ರಮ, ಸಾಮೂಹಿಕ ಇಷ್ಟ ಲಿಂಗ ಪೂಜೆ, ಪ್ರಾರ್ಥನೆ ಮತ್ತು
ದಾಸೋಹ ಜರಗಿತು. ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು, ಶರಣರು ಪಾಲ್ಗೊಂಡಿದ್ದರು.