ಸುದ್ದಿ ಕನ್ನಡ ವಾರ್ತೆ
ಕುಂದಗೋಳ: ಕುಂದಗೋಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ ‘ಧಾರವಾಡ ಸಂಸದ್ ಕ್ರೀಡಾ ಮಹೋತ್ಸವ–2025’ ಎರಡು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ಜರುಗಿದ್ದು, ಭಾನುವಾರ ಪ್ರಶಸ್ತಿ ವಿತರಣಾ ಸಮಾರಂಭದೊಂದಿಗೆ ಅದ್ದೂರಿಯಾಗಿ ತೆರೆ ಕಂಡಿತು.

ಈ ಕ್ರೀಡಾ ಮಹೋತ್ಸವದಲ್ಲಿ
ಕಬಡ್ಡಿ ಸ್ಪರ್ಧೆಯಲ್ಲಿ 120 ತಂಡಗಳು,
ಖೋ-ಖೋ ಸ್ಪರ್ಧೆಯಲ್ಲಿ 48 ತಂಡಗಳು,
ವಾಲಿಬಾಲ್ ಸ್ಪರ್ಧೆಯಲ್ಲಿ 74 ತಂಡಗಳು ಭಾಗವಹಿಸಿದ್ದು,
ವೈಯಕ್ತಿಕ ಕ್ರೀಡೆಗಳಲ್ಲಿ 275ಕ್ಕೂ ಹೆಚ್ಚು ಯುವಕ–ಯುವತಿಯರು ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಶಯದಂತೆ, ಗ್ರಾಮೀಣ ಹಾಗೂ ನಗರ ಭಾಗದ ಯುವಕ–ಯುವತಿಯರಲ್ಲಿ ಕ್ರೀಡಾ ಮನೋಭಾವ ಬೆಳೆಸುವುದು, ಕ್ರೀಡಾಪಟುಗಳಿಗೆ ವೇದಿಕೆ ಒದಗಿಸುವುದು ಹಾಗೂ ಅವರ ಪ್ರತಿಭೆಗಳನ್ನು ಗುರುತಿಸಿ ಪುರಸ್ಕರಿಸುವ ಉದ್ದೇಶದಿಂದ ಈ ಕ್ರೀಡಾ ಮಹೋತ್ಸವವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವು ಸಂಪೂರ್ಣ ಯಶಸ್ಸು ಕಂಡಿದೆ.ಈಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕುಂದಗೋಳ ಬಸವಣ್ಣಜ್ಜನವರ ಕಲ್ಯಾಣಪುರ ಮಠದ ಶ್ರೀಗಳಾದ ಶ್ರೀ ಶ್ರೀ ಅಭಿನವ ಬಸವಣ್ಣಜ್ಜನವರು,

ಕುಂದಗೋಳದ ಶಾಸಕರಾದ ಎಂ.ಆರ್. ಪಾಟೀಲ (M R Patil), ಲಿಂಗರಾಜ ಪಾಟೀಲ,
ಪಕ್ಷದ ಅಧ್ಯಕ್ಷರು, ಹಿರಿಯ ಪದಾಧಿಕಾರಿಗಳು, ಅಧಿಕಾರಿಗಳು, ಗಣ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ಹಾಗೂ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಗಣ್ಯರು ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಶುಭ ಹಾರೈಸಿದರು.