ಸುದ್ದಿ ಕನ್ನಡ ವಾರ್ತೆ
ಶಿರಸಿ: ಶಿರಸಿಯಿಂದ ಹಾವೇರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿ – 766E ಸಾಗರ ಮಾಲಾ ಯೋಜನೆಯಲ್ಲಿ ರಸ್ತೆ ರಿಪೇರಿ ಮಾಡದೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಅಮ್ಮಾಪುರ ಕನ್ಸ್ಟ್ರಕ್ಷನ್ ಕಂಪನಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಕುರಿತು ರಸ್ತೆ ಅಭಿವೃದ್ದಿಗೆ ಆಗ್ರಹಿಸುತ್ತಿರು ಹೋರಾಟಗಾರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಅವರಿಗೆ ದೂರು ನೀಡಿದರು.
ಜಿಲ್ಲೆಯ ವ್ಯಾಪ್ತಿಯ ಶಿರಸಿ- ಹಾವೇರಿ ಹೆದ್ದಾರಿ ಸಂಚಾರ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಮಳೆಗಾಲಕ್ಕೆ ಮುಂಚೆ ಈ ರಸ್ತೆಯ ಕಾಮಗಾರಿ ಸಮರ್ಪಕವಾಗಿ ಕೈಗೊಳ್ಳದರಿಂದ ಈಗ ವಾಹನ ಸವಾರರು ಹಾಗೂ ಪ್ರಯಾಣಿಕರು ಅಪಾಯದ ಸ್ಥಿತಿಯನ್ನು ಎದುರಿಸುವಂತಾಗಿದೆ. ಈ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವ ಗುತ್ತಿಗೆದಾರ ಕಂಪನಿ ಅಮ್ಮಾಪುರ ಕನ್ಸಟ್ರಕ್ಷನ್ ನ ಅಸಮರ್ಪಕ ಮತ್ತು ವಿಳಂಬ ನೀತಿಯ ಕಾರಣದಿಂದ ಈ ಸಮಸ್ಯೆ ಉಂಟಾಗಿದೆ ಎಂದಿದ್ದಾರೆ.
ಎರಡು ವರ್ಷಕ್ಕೆ ಮುಗಿಯಬೇಕಾಗಿದ್ದ ಕಾಮಗಾರಿ 4 ವರ್ಷ ವಾದರೂ ಪ್ರಾರಂಭವೇ ಆಗಿಲ್ಲ. ಕಾಮಗಾರಿಯಂತೂ ಇಲ್ಲ ಜತೆಯಲ್ಲಿ ಕನಿಷ್ಟ ನಿರ್ವಹಣೆಯನ್ನೂ ಮಾಡುತ್ತಿಲ್ಲ. ಆಭಾಗದ ಜನರ ಜೀವ ಅಪಾಯದಲ್ಲಿದೆ ಎಂದಿದ್ದಾರೆ.
ಈ ಮಾರ್ಗದ ಶಿರಸಿಯಿಂದ ಎಕ್ಕಂಬಿ -ಬಿಸ್ಲಕೊಪ್ಪ ಮಾರ್ಗದ ತುಂಬಾ ಸಾವಿರ ಸಂಖ್ಯೆಯ ಗುಂಡಿಗಳು ನಿರ್ಮಾಣವಾಗಿವೆ. ಹಾವೇರಿ ನಾಕರಕ್ರಾಸ್ ತನಕ ಯಮ ಯಾತನೆ ಆಗಿದೆ. ವಾಹನ ಸವಾರರು ನಿತ್ಯವೂ ಆಡಳಿತಕ್ಕೆ ಹಿಡಿಶಾಪ ಹಾಕುತ್ತಾ ಸಾಗುತ್ತಿದ್ದಾರೆ.
ಗುಂಡಿ ಮುಚ್ಚದ ಕಂಪನಿ ವಿರುದ್ಧ ಅದರ ಇಂಚಾರ್ಜ್ ಮ್ಯಾನೇಜರ್ ರಾಘವೇಂದ್ರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಮತ್ತು ಅವರನ್ನು ಕರೆದು ಠಾಣೆಯಲ್ಲಿ ವಿಚಾರಿಸಬೇಕೆಂದು ಮನವಿ ಮಾಡಿದರು.
ಎನ್.ಎಚ್.ಎ.ಐ ಅಧಿಕಾರಿಗಳಿಗೂ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.
ಈ ವೇಳೆ ಅನಂತಮೂರ್ತಿ ಹೆಗಡೆ, ಹಾಲಪ್ಪ ಜಕಳಣ್ಣವರ,
ವಿ.ಎಂ.ಭಟ್ಟ, ಜಿ.ಎಸ್. ಹೆಗಡೆ
ನಾಗರಾಜ್ ಇತರರು ಇದ್ದರು.