ಸುದ್ದಿ ಕನ್ನಡ ವಾರ್ತೆ

ಹೊಳೆಹೊನ್ನೂರು: ಸಮೀಪದ ಅರಹತೊಳಲು ಕೈಮರದಲ್ಲಿ ರೈತರು ಬೆಳೆದ ಅಡಿಕೆ ಗೋಡೋನ್ ಮೇಲೆ ಜಿಎಸ್ ಟಿ ಅಧಿಕಾರಿಗಳಿಂದ ದಾಳಿ ನಡಿಸಿ ಸುಮಾರು 23 ಕ್ವಿಂಟಾಲ್ ಮುಟ್ಟುಗೋಲು ಹಾಕಿಕೊಂಡು ತೆರಿಗೆ ಕಟ್ಟುವಂತೆ ರೈತರಿಗೆ ನೋಟೀಸ್ ನೀಡಿದ್ದಾರೆ.

ಚಂದ್ರಪ್ಪ ಎಂಬುವರಿಗೆ ಸೇರಿದ ಗೋಡೋನ್ ನಲ್ಲಿ ಸುಮಾರು 65 ಕ್ವಿಂಟಾಲ್ ಅಡಿಕೆ ದಾಸ್ತಾನು ಮಾಡಲಾಗಿದ್ದು, ಎಮ್ಮೆಹಟ್ಟಿ ಗ್ರಾಮದ ಕೋಟೇಶ್ ಎಂಬುವರಿಗೆ ಸೇರಿದ 23 ಕ್ವಿಂಟಾಲ್ ಅಡಿಕೆಯನ್ನು ಸೋಮವಾರ ಸಂಜೆ ವೇಳೆಯಲ್ಲಿ ಮಾರಾಟ ಮಾಡಲು ಕ್ಯಾಂಟರ್ ನಲ್ಲಿ ತುಂಬಿಸಲಾಗಿತ್ತು. ಆ ಸಮಯಕ್ಕೆ ಖಚಿತ ಮಾಹಿತಿ ಮೇರೆಗೆ ಬಂದ ಅಧಿಕಾರಿಗಳು ರೈತರ ಗೋಡೋನ್ ಹಾಗೂ ಕ್ಯಾಂಟರ್ ನ್ನು ತಡೆಹಿಡಿದು ಮುಟ್ಟುಗೋಲು ಹಾಕಿಕೊಂಡು ಹೋಗಿದ್ದಾರೆ.

ಇದರಿಂದ ರೊಚ್ಚಿಗೆದ್ದ ಕೆಲವು ರೈತರು, ರೈತರು ಬೆಳೆದ ಬೆಳೆಗೆ ಇದುವರೆಗೂ ಯಾವುದೇ ಸರ್ಕಾರ ತೆರಿಗೆ ಹಾಕಿಲ್ಲ. ರೈತರು ಸಾಲಸೂಲ ಮಾಡಿ ಬೆಳೆದ ಬೆಳೆಗಳಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ರೈತರು ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿ ರೈತರು ಬೆಳೆದ ಬೆಳೆಗೆ ಅಧಿಕಾರಿಗಳು ಏಕಾಏಕಿ ಬಂದು ತೆರಿಗೆ ವಿಧಿಸುತ್ತಿದ್ದಾರೆ. ಇಲ್ಲಿ ಯಾರು ಕೂಡ ವ್ಯಾಪಾರದಾರರಲ್ಲ. ರೈತರು ಬೆಳೆದ ಬೆಳೆಗೆ ಮನೆಯಲ್ಲಿ ಸ್ಥಳಾವಕಾಶವಿಲ್ಲದೇ ಇರುವುದರಿಂದ ಬಾಡಿಗೆ ಗೋಡೋನ್ ನಲ್ಲಿ ಅಡಿಕೆ ದಾಸ್ತಾನು ಇಡಲಾಗಿದೆ.ಹೊರತು ಸರ್ಕಾರದ ಕಣ್ಣುತಪ್ಪಿಸಿ ವ್ಯಾಪಾರ ಮಾಡುವ ಯಾವುದೇ ಉದ್ದೇಶವಿಲ್ಲ. ಇದೇ ದಾಳಿ ಮುಂದುವರೆದರೆ ರೈತರು ಒಗ್ಗಟ್ಟಾಗಿ ಸರ್ಕಾರದ ವಿರುಧ್ದ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ನಾವು ಬೆಳೆದ ಅಡಿಕೆ ಕಷ್ಟದ ಸಂದರ್ಭದಲ್ಲಿ ಸಹಾಯಕ್ಕೆ ಬರಲೆಂದು ಬಾಡಿಗೆ ಗೋಡೋನ್ ನಲ್ಲಿ ಇರಿಸಲಾಗಿತ್ತು. ಆದರೆ ಅಧಿಕಾರಿಗಳು ಏಕಾಏಕಿ ಬಂದು ಕೇವಲ 23 ಕ್ವಿಂಟಾಲ್ ಅಡಿಕೆಯನ್ನು ಮುಟ್ಟುಗೋಲು ಹಾಕಿಕೊಂಡರೆ ಈ ಬಾರಿ ಅಡಿಕೆ ಇಳುವರಿ ಇಲ್ಲದೇ ರೈತರು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳ ನಡೆ ಸರ್ಕಾರ ದುರಾಡಳಿತ ಪರಮಾವಧಿ ತೋರಿಸುತ್ತದೆ ಎಂದು ರೈತರು ಆರೋಪ ಮಾಡಿದರು.