ಸುದ್ದಿ ಕನ್ನಡ ವಾರ್ತೆ
ಸೇಬು ಎಂದರೆ ನಮಗೆ ಥಟ್ಟನೆ ನೆನಪಾಗುವುದು ಕಾಶ್ಮೀರ ಅಥವಾ ಹಿಮಾಚಲ ಪ್ರದೇಶ. ಶೀತ ಪ್ರದೇಶದಲ್ಲಿಯೇ ಸೇಬು ಬೆಳೆಯಲಾಗುತ್ತದೆ ಎಂಬ ಅಲಿಖಿತ ನಂಬಿಕೆಯನ್ನು ಸುಳ್ಳಾಗಿಸಿರುವ ತಾಲೂಕಿನ ರೈತನೋರ್ವ ತನ್ನ ಬಯಲುಸೀಮೆ ಜಮೀನಿನಲ್ಲಿ ಸೇಬು ಬೆಳೆಯುವ ಮೂಲಕ ಸಾರ್ವಜನಿಕರು ನಿಬ್ಬೆರಗಾಗುವಂತೆ ಮಾಡಿದ್ದಾರೆ.
ಮೂಲತಃ ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದ ರೈತ ಶ್ರೀಶೈಲ ತೇಲಿ ಅವರು ಕೆಲ ವರ್ಷಗಳ ಹಿಂದೆ ಕುಳಲಿ ಗ್ರಾಮದ ವ್ಯಾಪ್ತಿಯಲ್ಲಿ ಖರೀದಿಸಿದ ಜಮೀನಿನಲ್ಲಿ ಸೇಬು ಬೆಳೆದು ಭರ್ಜರಿ ಫಸಲನ್ನು ತೆಗೆದಿದ್ದಾರೆ.
7ಎಕರೆಯಲ್ಲಿ ಸಮೃದ್ದಿ ಕೃಷಿ : ರೈತ ಶ್ರೀಶೈಲ ಅವರು ತಮ್ಮ ಏಳು ಎಕರೆಯಲ್ಲಿ ಎರಡು ವರ್ಷಗಳಿಂದ ಸೇಬು ಹಣ್ಣಿನ ಕೃಷಿ ಮಾಡುತ್ತಿದ್ದಾರೆ. 10*10 ಅಡಿ ಜಾಗದಲ್ಲಿ ಸಸಿ ನಾಟಿ ಮಾಡಿರುವ ರೈತ ತೋಟದಲ್ಲಿರುವ ಬೋರ್ ವೆಲ್ ಮೂಲಕ ಹನಿ ನೀರಾವರಿ ಅಳವಡಿಸಿಕೊಂಡು ಸಸಿಗಳನ್ನು ಸಮೃದ್ದವಾಗಿ ಬೆಳೆದಿದ್ದಾರೆ. ಪ್ರತಿಗಿಡಕ್ಕೆ ನೂರರಿಂದ ನೂರಿಪ್ಪತ್ತು ಕಾಯಿಗಳು ಬಿಡುತ್ತಿದ್ದು ರೈತನಿಗೆ ಭರ್ಜರಿ ಲಾಭ ತಂದುಕೊಟ್ಟಿವೆ. ಕಾಶ್ಮೀರಿ ಸೇಬನ್ನು ಮೀರಿಸುವಂತಹ ರುಚಿ ಹೊಂದಿದ್ದು ವ್ಯಾಪಾರಸ್ಥರು ನಾ ಮುಂದು ತಾ ಮುಂದು ಎಂದು ಖರೀದಿಗೆ ಬರುತ್ತಾರೆ ಎನ್ನುತ್ತಾರೆ ಸೇಬು ಬೆಳೆಗಾರ ಶ್ರೀಶೈಲ.
ತರಹೇವಾರ ತಳಿ : ಏಳು ಎಕರೆ ಜಮೀನಿನಲ್ಲಿ ಒಟ್ಟು 2620 ಸಸಿ ನಾಟಿ ಮಾಡಿರುವ ರೈತ ಅವುಗಳ ಆರೈಕೆಗೆ ಜೀವಾಮೃತ ಸೇರಿದಂತೆ ವಿವಿಧ ಬಗೆಯ ಸಾವಯವ ಗೊಬ್ಬರ ಬಳೆಕೆ ಮಾಡುತ್ತಾರೆ. ಮಹಾರಾಷ್ಟ್ರದ ಶಿರಡಿಯಿಂದ ಅನ್ನಾರಿ, ಹರ್ಮನ್ 99, ಹಾಗೂ ಗೋಲ್ಡನ್ ಡಾಟ್ ಎಂಬ ತಳಿಯ ಸಸಿಗಳನ್ನು ನಾಟಿ ಮಾಡಿದ್ದು ಇಂದು ಭರ್ಜರಿ ಫಸಲು ಪಡೆಯುತ್ತಿದ್ದಾರೆ.
ಬೆಳೆ ರಕ್ಷಣೆಗೆ ಬಲೆ ಬಳಕೆ : ಜಮೀನಿನಲ್ಲಿ ಕಟಾವಿಗೆ ಬಂದಿರುವ ಸೇಬು ಕಾಪಾಡಿಕೊಳ್ಳು ಎಲ್ಲ ಗಿಡಗಳುಗೂ ಬಲೆಯ ವ್ಯವಸ್ಥೆ ಮಾಡಲಾಗಿದೆ. ಪಕ್ಷಿಗಳು ಹಾಗೂ ಅಳಿಲು ತೋಟಕ್ಕೆ ನುಗ್ಗಿ ಹಣ್ಣನ್ನು ಕಚ್ಚಿ ಹಾಳು ಮಾಡುತ್ತಿರುವುದರಿಂದ ಮೊದಲು ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳು ಹಾಳಾಗುತ್ತಿದ್ದವು. ಅದನ್ನು ತಪ್ಪಿಸಲು ಪ್ರತಿ ಗಿಡಕ್ಕೂ ಬಲೆಯಿಂದ ರಕ್ಷಣೆ ನೀಡಿದ್ದು ಅಳಿಲು ಹಾಗೂ ಪಕ್ಷಿಗಳ ಕಾಟದಿಂದ ಮುಕ್ತಿ ಪಡೆದಿದ್ದಾರೆ.
ಕಡಿಮೆ ನೀರು ಬಳಕೆ :ಸೇಬು ಬೆಳೆಯೆಂದರೆ ಶೀತ ಪ್ರದೇಶದಲ್ಲಿ ಸಮೃದ್ದಿಯಾಗಿ ಬರುತ್ತದೆ ಎಂಬ ನಂಬಿಕೆ ಸುಳ್ಳು. ಸರಿಯಾದ ಆರೈಕೆ ಕಾಲಕ್ಕೆ ತಕ್ಕಂತೆ ಸಾವಯವ ಗೊಬ್ಬರ ನೀಡಿದರೆ ಕಡಿಮೆ ನೀರು ಬಳಸಿಯೂ ಸೇಬು ಬೆಳೆಯನ್ನು ಯಶಸ್ವಿಯಾಗಿ ಬೆಳೆಯಬಹುದು. ಅದಕ್ಕೆ ನಾನೇ ಉತ್ತಮ ಉದಾಹರಣೆ ಎನ್ನುತ್ತಾರೆ ಸೇಬು ಬೆಳೆದಿರುವ ರೈತ.
ಕೈ ಹಿಡಿದ ಹೊಸತನದ ಕಲಿಕೆ :ಹಳೆಯ ಕೃಷಿ ಪದ್ದತಿಯಿಂದ ವಿಮುಖರಾಗಿ ಹೊಸತನದ ಕಲಿಕೆಗೆ ಹಾತೊರೆಯುತ್ತಿದ್ದ ಶ್ರೀಶೈಲ ಅವರಿಗೆ ಸೇಬು ಬೆಳೆ ಬೆಳೆದು ಹೊತನವನ್ನು ಕಲಿಯಬೇಕು ಎಂಬ ಮನೋಭಾವದಿಂದ ಕೃಷಿ ಆರಂಭಿಸಿದ್ದರು. 37-40ರಷ್ಟು ಉಷ್ಣಾಂಶ ಪ್ರದೇಶದಲ್ಲಿ ಸೇಬು ಬೆಳೆ ಕೈಹಿಡಿಯುವುದಿಲ್ಲ ಎಂದು ಮೊದಲಿಸಿದವರೆ ಹೆಚ್ಚು. ಹೀಗಳಿಕೆ ಮಾತಿಗೆ ಬೆಲೆ ಕೊಡದೆ ತಮ್ಮ ಕಾಯಕದಲ್ಲಿ ತೊಡಗಿಕೊಂಡು ಇಂದು ಆಡಿಕೊಳ್ಳುವವರು ತಿರುಗಿ ನೋಡುವಂತ ಸಾಧನೆ ಮಾಡಿದ್ದಾರೆ.
ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ : ತೇಲಿಯವರ ಸೇಬುಗೆ ಸ್ಥಳೀಯ ಮಟ್ಟದಲ್ಲಿಯೇ ಉತ್ತಮ ಮಾರುಕಟ್ಟೆ ದೊರೆಯುತ್ತಿದೆ. ಜಮಖಂಡಿ, ಮಹಾಲಿಂಗಪುರ, ಮುಧೋಳ, ಬೀಳಗಿ ಹಾಗೂ ರಾಯಬಾಗ ಸೇರಿದಂತೆ ಸುತ್ತಮುತ್ತಲಿನ ನಗರಪ್ರದೇಶದಿಂದ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಪ್ರತಿ ಕೆ.ಜಿಗೆ 100-120ರೂ ದಂತೆ ಮಾರಾಟವಾಗುತ್ತಿದೆ.
ಮಿಶ್ರ ಬೆಳೆಗೆ ಹೆಚ್ಚು ಅನುಕೂಲ:ಸೇಬು ಹಣ್ಣಿನ ಸಸಿಯನ್ನು 10*10 ಅಡಿ ಜಾಗದ ಅಂತರದಲ್ಲಿ ಬೆಳೆಯುವುದರಿಂದ ಮಧ್ಯದ ಜಾಗದಲ್ಲಿ ಮಿಶ್ರ ಬೆಳೆ ಬೆಳೆಯಲು ಹೆಚ್ಚು ಅನುಕೂಲ. ಅಲ್ಪಾವಧಿ ಬೆಳೆಗಳಾದ ಈರುಳ್ಳಿ, ಕಲ್ಲಂಗಡಿ, ಖರಬೂಜ್, ಹೆಸರು, ಮೆಕ್ಕೆಜೋಳದಂತಹ ಬೆಳೆಯನ್ನು ಬೆಳೆದು ಹೆಚ್ಚಿನ ಲಾಭ ಗಳಿಸಬಹುದು. ಸಸಿ ನಾಟಿಮಾಡಿದ ಕೆಲ ವರ್ಷಗಳಲ್ಲಿ ಶ್ರೀಶೈಲ ಅವರು ಮಿಶ್ರ ಬೇಸಾಯದ ಮೂಲಕ ಹೆಚ್ಚಿನ ಲಾಭವನ್ನು ಗಳಿಸಿದ್ದಾರೆ.
******
ಮೊದ ಮೊದಲು ಸೇಬು ಬೆಳೆಯನ್ನು ಒಂದು ಪ್ರಾಯೋಗಿಕ ಬೆಳೆಯನ್ನಾಗಿ ಬೆಳೆದೆ. ಆದರೆ ಅಧಿಕ ಇಳುವರಿ ಹಾಗೂ ಕಡಿಮೆ ಖರ್ಚಿನಿಂದ ಇಂದು ಅದೇ ನಮಗೆ ಮುಖ್ಯ ಬೆಳೆಯಾಗಿದೆ. ಯಾರದೋ ಮಾತು ಕೇಳಿ ಕೃಷಿ ಆರಂಭಿಸುವುದಕ್ಕಿಂತ ಸ್ವ ಇಚ್ಛೆಯಿಂದ ಕೃಷಿಯಲ್ಲಿ ತೊಡಗಿದರೆ ಯಶಸ್ಸು ಪಡೆಯಬಹುದು. ಸೇಬಿಗೆ ಸ್ಥಳೀಯ ಮಟ್ಟದ ಮಾರುಕಟ್ಟೆ ದೊರೆಯುವುದರಿಂದ ಲಾಭದ ಪ್ರಮಾಣವೂ ಹೆಚ್ಚಿರುತ್ತದೆ.
ಶ್ರೀಶೈಲ ತೇಲಿ ಸೇಬು ಬೆಳೆಗಾರ