ಸುದ್ದಿ ಕನ್ನಡ ವಾರ್ತೆ
ಗಂಗಾವತಿ: ವಿದೇಶಿ ಮಹಿಳೆಯ ಮೇಲಿನ ಲೈಂಗೀಕ ದೌರ್ಜನ್ಯ ಒರ್ವ ವ್ಯಕ್ತಿ ಕೊಲೆಯ ನಂತರ ಕೊಪ್ಪಳ ಜಿಲ್ಲಾಡಳಿತ ಆನೆಗೊಂದಿ ಸಾಣಾಪೂರ ಭಾಗದ ಹೋಂಸ್ಟೇ, ರೆಸಾರ್ಟ್ಗಳನ್ನು ಬಂದ್ ಮಾಡಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ಟೀಕಿಸಿದ್ದಾರೆ.
ಈ ಕುರಿತು ವಿಧಾನಸಭೆಯ ಅಧಿವೇಶದಲ್ಲಿ ಗಮನ ಸೆಳೆಯ ಪ್ರಶ್ನೋತ್ತರ ಸಮಯದಲ್ಲಿ ಮಾತನಾಡಿ, ಹಂಪಿ ಆನೆಗೊಂದಿ ಮತ್ತು ಸಾಣಾಪೂರ ಪ್ರದೇಶ ಹಾಗೂ ತುಂಗಭದ್ರಾ ನದಿ ಪಾತ್ರ, ಪ್ರಾಕೃತಿಕ ಸೌಂದರ್ಯ ಇಡೀ ಜಗತ್ತಿನ ಗಮನ ಸೆಳೆದಿದೆ. ಆದ್ದರಿಂದ ಪ್ರತಿ ವರ್ಷ 3 ಲಕ್ಷಕ್ಕೂ ಅಧಿಕ ಪ್ರವಾಸಿಗರು ಆಗಮಿಸುತ್ತಿದ್ದಾರೆ,.
ಜತೆಗೆ ಕಿಷ್ಕಿಂಧಾ ಅಂಜನಾದ್ರಿಗೆ ನಿತ್ಯವೂ ಸಾವಿರಾರು ಹನುಮಭಕ್ತರು ಬರುತ್ತಿದ್ದು ಆನೆಗೊಂದಿ ಭಾಗದಲ್ಲಿ ಕೃಷಿ ಭೂಮಿ ಕಡಿಮೆ ಇರುವ ಕಾರಣ ಈ ಭಾಗದ ಜನರು ಸಣ್ಣಪುಟ್ಟ ವ್ಯಾಪಾರ, ಹೋಂಸ್ಟೇ, ಸುಂದರ ಗುಡಿಸಲುಗಳ ರೆಸಾರ್ಟ್ಗಳನ್ನು ನಿರ್ಮಿಸಿಕೊಂಡು ಕಳೆದ 30 ವರ್ಷಗಳಿಂದ ಬದುಕು ನಡೆಸುತ್ತಿದ್ದಾರೆ. ಇತ್ತೀಚೆಗೆ ಸಾಣಾಪೂರ ಕೆರೆಯ ದುರಂತ ಜರುಗಿದ್ದು ತಾಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಆನೆಗೊಂದಿ, ಸಾಣಾಪೂರ ಭಾಗದ ಜನರನ್ನು ಅಪರಾಧಿಗಳು ಎನ್ನುವಂತೆ ನೋಡುತ್ತಿದ್ದಾರೆ. ಬೇರೆ ಊರಿನ ಮೂರು ಜನ ಯುವಕರು ಮಾಡಿದ ತಪ್ಪಿಗೆ ಆನೆಗೊಂದಿ ಭಾಗದ ಜನರು ಶಿಕ್ಷೆ ಅನುಭವಿಸುವಂತಾಗಿದೆ. ಹೋಂಸ್ಟೇ, ರೆಸಾರ್ಟ್ಗಳನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದು ಸರಿಯಲ್ಲ. ನಮ್ಮ ಹಿರಿಮೆ ಹೆಚ್ಚಾಗಲು ಹೋಂಸ್ಟೇ, ರೆಸಾರ್ಟ್ ಮಾಲೀಕರು, ಈ ಭಾಗದ ಸಣ್ಣಪುಟ್ಟ ವ್ಯಾಪಾರಿಗಳು ಜನರು, ಗೈಡ್ ಗಳು ಕಾರಣರಾಗಿದ್ದಾರೆ. ಸಮಸ್ಯೆಯಾದ ತಕ್ಷಣ ಹೋಂಸ್ಟೇ, ರೆಸಾರ್ಟ್ ಮುಚ್ಚಿಸುವ ಬದಲಿಗೆ ಹಂಪಿ ಹಾಗೂ ಆನೆಗೊಂದಿ ಭಾಗದಲ್ಲಿ ಪ್ರತೇಕ ಪೊಲೀಸ್ ಠಾಣೆ ಮಂಜೂರಿ ಮಾಡಿ ಹಗಲು ರಾತ್ರಿ ಹೊಯ್ಸಳ ಮಾದರಿ ಗಸ್ತು ತಿರುಗಬೇಕು. ಅಕ್ರಮ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಅದನನ್ನು ಬಿಟ್ಟು ಹೋಟೇಲ್ ಮಾಲೀಕರನ್ನು ಅಪರಾಧಿಗಳ ತರಹ ನೋಡುವುದು ಪದೇ ಪದೇ ತೆರವು ಕಾರ್ಯಾಚರಣೆ ಮಾಡುವುದು ಸರಿಲ್ಲ. ಕೂಡಲೇ ಗೃಹ,ಪ್ರವಾಸೋದ್ಯಮ ಸಚಿವರು,ಜಿಲ್ಲಾ ಉಸ್ತುವಾರಿ ಸಚಿವರು ಆ ಭಾಗದ ಶಾಸಕರು, ಸಂಸದರು ಜನಪ್ರತಿನಿಧಿಗಳ ಸಭೆ ಕರೆದು ಸಮಸ್ಯೆ ಕುರಿತು ಚರ್ಚೆ ನಡೆಸಿ ಹೋಂಸ್ಟೇ, ರೆಸಾರ್ಟ್ ವ್ಯಾಪಾರಕ್ಕೆ ನಿಯಮಾನುಸಾರ ಅವಕಾಶ ಕಲ್ಪಿಸಿ ಸ್ಥಳೀಯರು ಜನರು ಬದುಕಲು ನೆರವಾಗುವಂತೆ ಮನವಿ ಮಾಡಿದರು.