ಸುದ್ದಿ ಕನ್ನಡ ವಾರ್ತೆ
ಸಾಗರ: ಜೈ ಶ್ರೀರಾಮ್ ಘೋಷಣೆಯೇ ಕೆಲವರಿಗೆ ಪ್ರಚೋದನಕಾರಿಯಾಗಿರುವುದು ದುರಂತ. ಸ್ವಲ್ಪ ದಿನ ಹೋದರೆ ಕೇಸರಿ ಬಣ್ಣ ಕಂಡರೆ ನಮಗೆ ಆಗುವುದಿಲ್ಲ. ಕೇಸರಿ ಬಣ್ಣವನ್ನೇ ನಿಷೇದಿಸಬೇಕು ಎಂದು ಆದೇಶ ಹೊರಡಿಸಿದರೂ ಅಚ್ಚರಿಯಿಲ್ಲ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ವತಿಯಿಂದ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ೩೯೫ನೇ ಜಯಂತ್ಯೋತ್ಸವದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡುತ್ತಾ, ಇನ್ನು ಕೆಲವೇ ದಿನದಲ್ಲಿ ದೇಶದ ಸಾಧುಗಳು ಕೇಸರಿ ಬಣ್ಣದ ಬಟ್ಟೆ ಬಿಟ್ಟು ಬೇರೆ ಬಣ್ಣದ ಬಟ್ಟೆ ಧರಿಸಬೇಕಾದೀತು. ಏಕೆಂದರೆ ಕೇಸರಿ ಬಣ್ಣ ಕಂಡರೆ ನಮಗೆ ಪ್ರಚೋದನೆಯಾಗುತ್ತದೆ ಎಂಬ ಕೆಲವರ ಮನಸ್ಥಿತಿಗೆ ನಾವೇನು ಮಾಡಬೇಕು ಎಂದು ಪ್ರಶ್ನಿಸಿದರು.
ಹಿಂದೂಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಬಂದ ಅಭಿಪ್ರಾಯಕ್ಕೆ ಪೂರಕವಾಗಿ ನಾನು ಹಿಂದೂ ಧರ್ಮದ ಯುವಕರು ಅನ್ಯ ಜಾತಿಯ ಹೆಣ್ಣು ಮಕ್ಕಳನ್ನು ಪ್ರೀತಿಸಿ ಮದುವೆಯಾಗಬೇಕು. ಈ ಜಾತಿಯವರು, ಈ ಜಾತಿಯವರನ್ನೇ ಜಾತಿಯವರನ್ನು ಮದುವೆಯಾಗಬೇಕು ಎಂದು ನಾವು ಚೌಕಟ್ಟು ಹಾಕಿಕೊಂಡಿದ್ದೇವೆ. ಆ ಚೌಕಟ್ಟನ್ನು ಮೀರಿ ಸ್ವಲ್ಪ ಹೊರಗೆ ನೋಡಿ. ಇತರರು ಹೇಗೆ ಅನ್ಯಧರ್ಮಿಯರನ್ನು ಮದುವೆಯಾಗುತ್ತಾರೋ ನೀವು ಹಾಗೆ ಮಾಡಿ ಎಂದು ಹೇಳಿದ್ದನ್ನೇ ಕೆಲವರು ಬೇರೆ ರೀತಿ ಬಿಂಬಿಸಿ ನಾನು ಪ್ರಚೋದನಕಾರಿಯಾಗಿ ಭಾಷಣ ಮಾಡುತ್ತಿದ್ದೇನೆ ಎಂದು ಎಫ್‌ಐಆರ್ ಹಾಕಿಸಿದ್ದಾರೆ. ನಾನು ದ್ವೇಷವನ್ನು ತುಂಬುವ ಕೆಲಸ ಮಾಡಿಲ್ಲ. ಪರಸ್ಪರ ಸಾಮರಸ್ಯ ಬಿತ್ತುವ ಪ್ರೀತಿಯ ಭಾಷಣ ಮಾಡಿದ್ದೇನೆ. ಅದಕ್ಕೆ ಪ್ರಚೋದನಾಕಾರಿ ಎಂದು ಪಟ್ಟ ಕಟ್ಟುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಾವು ಹೊಸ ಭಾರತ ನಿರ್ಮಾಣದತ್ತ ಹೆಜ್ಜೆ ಹಾಕಿದ್ದೇವೆ. ಇದರ ನಡುವೆ ಜಾತಿ ಜಾತಿ ಹೆಸರಿನಲ್ಲಿ ನಾವು ಪೈಪೋಟಿ ನಡೆಸುತ್ತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಪಕ್ಷದ ಅಭ್ಯರ್ಥಿ ಸ್ಪರ್ಧೆ ಮಾಡಲಿ. ಆತ ಹಿಂದುತ್ವದ ಪರ ಇದ್ದರೆ ಅಂತಹವನನ್ನು ಬೆಂಬಲಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಜಾತಿ ಸಮಾವೇಶದ ನಡುವೆಯೂ ಹಿಂದೂ ಸಮಾವೇಶ ನಡೆಯಬೇಕು. ಹಿಂದೂ ಸಮಾಜವನ್ನು ಪುನರ್ ನಿರ್ಮಿಸುವ ಸಂಕೀರ್ಣ ಕಾಲಘಟ್ಟ ಇದಾಗಿದೆ. ಮೊನ್ನೆ ಬಜೆಟ್‌ನಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಒಂದೇ ಸಮುದಾಯಕ್ಕೆ ನೀಡಲಾಗಿದೆ. ಗುತ್ತಿಗೆ ವಿಚಾರದಲ್ಲಿ ಮೀಸಲಾತಿ ಕೊಡಲಾಗುತ್ತಿದೆ. ಎಲ್ಲಿಯವರೆಗೆ ಸಜ್ಜನರು ನಡೆಯುವ ಅನ್ಯಾಯವನ್ನು ನೋಡಿಕೊಂಡು ಮೌನವಾಗಿರುತ್ತಾರೋ ದೇಶ ಅವನತಿ ಹತ್ತಿರ ಸಾಗುತ್ತದೆ. ಶಿವಾಜಿ ಅವರ ದೇಶಪ್ರೇಮವನ್ನು ನಾವು ಸ್ಮರಿಸಿಕೊಳ್ಳುತ್ತಾ ಭಾರತ ದೇಶವನ್ನು ಶಕ್ತಿಶಾಲಿಯಾಗಿಸುವ ಸಂಕಲ್ಪ ಕೈಗೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ, ಛತ್ರಪತಿ ಶಿವಾಜಿ ಮಹಾರಾಜರ ಆದರ್ಶವನ್ನು ಪಾಲಿಸುವ ಜೊತೆಗೆ ಭಾರತ ದೇಶವನ್ನು ಕಟ್ಟುವ ಸಂಕಲ್ಪ ನಮ್ಮದಾಗಬೇಕು. ಪ್ರತಿಯೊಬ್ಬರೂ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು. ಇಂತಹ ಜಯಂತಿಗಳು ನಮ್ಮಲ್ಲಿ ದೇಶವನ್ನು ಕಟ್ಟುವ ಉತ್ಸಾಹ ಸೃಷ್ಟಿಸಬೇಕು ಎಂದು ಹೇಳಿದರು.
ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷೆ ಪ್ರತಿಮಾ ಸತೀಶ್ ಜೋಗಿ ಅಧ್ಯಕ್ಷತೆ ವಹಿಸಿದ್ದರು. ಭಜರಂಗ ದಳ ಜಿಲ್ಲಾ ಸಂಯೋಜಕ ಸಂತೋಷ್ ಶಿವಾಜಿ ಉಪಸ್ಥಿತರಿದ್ದರು. ನಂದಿನಿ ಪ್ರಾರ್ಥಿಸಿದರು. ಸುನೀಲ್ ರುದ್ರಪ್ಪ ಸ್ವಾಗತಿಸಿದರು. ಪ್ರಭಂಜನ್ ಸೂರ್ಯ ಪ್ರಾಸ್ತಾವಿಕ ಮಾತನಾಡಿದರು. ರಾಮು ವಂದಿಸಿದರು. ರೇವತಿ ನಿರೂಪಿಸಿದರು. ಇದಕ್ಕೂ ಮೊದಲು ಮಹಾಗಣಪತಿ ದೇವಸ್ಥಾನದಿಂದ ಶಿವಾಜಿ ಮಹಾರಾಜರ ಪುತ್ಥಳಿ ಹೊತ್ತ ಬೃಹತ್ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸಾವಿರಾರು ಜನರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಪ್ರಾರ್ಥನೆಗೆ ಅಡ್ಡಿ; ಆಕ್ಷೇಪ
ಶಿವಾಜಿ ಜಯಂತಿ ಶೋಭಾಯಾತ್ರೆ ಎಕ್ಸ್ ಸರ್ಕಲ್‌ಗೆ ಬರುತ್ತಿದ್ದಂತೆ ಸ್ವಲ್ಪಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮೆರವಣಿಗೆ ಮುಂದೆ ಸಾಗುತ್ತಿದ್ದಂತೆಯೇ ಮುಸ್ಲೀಂ ಬಂಧುಗಳು ಎಕ್ಸ್ ವೃತ್ತಕ್ಕೆ ಮೆರವಣಿಗೆ ಬಂದಾಗ ಧ್ವನಿವರ್ಧಕದ ಶಬ್ದ ಹೆಚ್ಚಿಸಿ ನಮ್ಮ ಪ್ರಾರ್ಥನೆಗೆ ತೊಂದರೆ ಕೊಟ್ಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು. ನಂತರ ಪೊಲೀಸರು ಅವರನ್ನು ಸಮಾಧಾನಪಡಿಸಿ ವಾಪಾಸ್ ಕಳಿಸಿದರು.