ಸುದ್ದಿಕನ್ನಡ ವಾರ್ತೆ
Goa : ಗೋವಾದ ಬಹುತೇಕ ಅಣೇಕಟ್ಟುಗಳಲ್ಲಿ ನೀರಿನ ಮಟ್ಟ ಶೇ 40 ಕ್ಕಿಂತ ಕೆಳಗಿಳಿದಿದ್ದರೂ ಕೂಡ ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆಯುಂಟಾಗುವುದಿಲ್ಲ ಎಂದು ಗೋವಾ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಭರವಸೆ ನೀಡಿದೆ.
ಗೋವಾ ರಾಜ್ಯ ಜಲಸಂಪನ್ಮೂಲ ಇಲಾಖೆಯ ಸಚಿವ ಸುಭಾಷ್ ಶಿರೋಡಕರ್ ಸುದ್ಧಿಗಾರರೊಂದಿಗೆ ಮಾತನಾಡಿ- ರಾಜ್ಯದ ಅಣೇಕಟ್ಟುಗಳಲ್ಲಿ ಸದ್ಯ ಇರುವ ನೀರು ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸುವಷ್ಟಿದೆ. ಸದ್ಯ ಇರುವ ನೀರು ಇನ್ನು 150 ದಿನಗಳಿಗೆ ಸಾಕಾಗಲಿದೆ. ಮುಂದಿನ ಮೂರು ತಿಂಗಳಂತೂ ಕುಡಿಯುವ ನೀರಿಗೆ ಚಿಂತಿಸುವ ಅಗತ್ಯವಿಲ್ಲ ಎಂದರು. ಸರ್ಕಾರವು ಪರಿಸ್ಥಿತಿಯನ್ನು ನೋಡಿಕೊಂಡು ಅಗತ್ಯ ಬಿದ್ದರೆ ಉಪಾಯ ಯೋಜನೆಯನ್ನು ಕೈಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
ಕಳೆದ ಸುಮಾರು ಮೂರು ತಿಂಗಳಿಂದ ಗೋವಾ ರಾಜ್ಯದಲ್ಲಿ ಹವಾಮಾನ ಬದಲಾವಣೆಯಾಗಿ ಉಷ್ಣತೆ ಹೆಚ್ಚಾಗಿದೆ. ಇದರಿಂದಾಗಿ ರಾಜ್ಯದ ಅಣೇಕಟ್ಟಿನಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಆವಿಯಾಗಿ ಹೋಗಿದೆ. ಕಳೆದ ವರ್ಷ ಗೋವಾದಲ್ಲಿ ಅಣೇಕಟ್ಟು ಉತ್ತಮ ಮಳೆಯಾಗಿದ್ದರಿಂದ ಎರಡು ಬಾರಿ ಭರ್ತಿಯಾಗಿತ್ತು.