ಸುದ್ದಿಕನ್ನಡ ವಾರ್ತೆ
Goa : ಗೋವಾದ ಸಂಜೀವಿನಿ ಸಕ್ಕರೆ ಕಾರ್ಖಾನೆ ಮತ್ತೆ ಆರಂಭಿಸಲಾಗುವುದು. ಪಿಪಿಪಿ ಆಧಾರದ ಮೇಲೆ ಸಂಜೀವಿನಿ ಸಕ್ಕರೆ ಕಾರ್ಖಾನೆಗೆ ಪ್ರಕ್ರಿಯೆ ಆರಂಭವಾಗಿದ್ದು, ಶೀಘ್ರದಲ್ಲೇ ಟೆಂಡರ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ತಿಳಿಸಿದ್ದಾರೆ.

ಮಡಗಾಂವ ನಾವೇಲಿಯಲ್ಲಿ ಮುಖ್ಯಮಂತ್ರಿ ಡಾ. ಸಾವಂತ್ ಮಾಧ್ಯಮಗಳೊಂದಿಗೆ ಮಾತನಾಡಿ- ಸಂಜೀವಿನಿ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಸಂಜೀವಿನಿ ಸಕ್ಕರೆ ಕಾರ್ಖಾನೆ ಮುಚ್ಚುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಎಂದು ವರದಿಗಾರರು ಕೇಳಿದಾಗ, ರಾಜ್ಯ ಸರ್ಕಾರ ಸಂಜೀವಿನಿ ಸಕ್ಕರೆ ಕಾರ್ಖಾನೆಯನ್ನು ಮತ್ತೆ ತೆರೆಯಲಾಗುವುದು ಎಂದು ಹೇಳಿದೆ. ಇದಕ್ಕಾಗಿ, ಕಾರ್ಖಾನೆಯನ್ನು ನಿರ್ಮಾಣ, ಕಾರ್ಯಾಚರಣೆ ಮತ್ತು ಹಿಂತಿರುಗಿಸುವಿಕೆ (ಪಿಪಿಪಿ) ಆಧಾರದ ಮೇಲೆ ಪುನರಾರಂಭಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಅದರಂತೆ, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂಬ ಮಾಹಿತಿ ನೀಡಿದರು.

ಗೋವಾ ಡೇರಿಯನ್ನು ಸ್ಥಳಾಂತರಿಸಲಾಗುತ್ತಿರುವ ಬಗ್ಗೆ ಕೇಳಿದಾಗ, ಗೋವಾ ಡೇರಿ ಈಗಿದ್ದಲ್ಲೇ ಇರಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ಇದಲ್ಲದೆ, ಉಸ್ಗಾಂವ್‍ನಲ್ಲಿ ಹೊಸ ಗೋವಾ ಡೇರಿ ಘಟಕವನ್ನು ನಿರ್ಮಿಸಲಾಗುವುದು. ಈ ಗೋವಾ ಡೇರಿ ಘಟಕವು ಹಳೆಯದಾಗಿದ್ದು, ಸುಮಾರು 50 ವರ್ಷ ಹಳೆಯದಾಗಿದೆ. ಆದ್ದರಿಂದ, ಉಸ್ಗಾಂವ್‍ನಲ್ಲಿ ಹೊಸ ಘಟಕವನ್ನು ನಿರ್ಮಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಾವಂತ್ ಹೇಳಿದರು.

ಗೋವಾದ ಕಬ್ಬು ಕರ್ನಾಟಕಕ್ಕೆ…?
ಗೋವಾದಲ್ಲಿರುವ ಸಂಜೀವಿನಿ ಸಕ್ಕೆರೆ ಕಾರ್ಖಾನೆ ಕಳೆದ ಕೆಲ ವರ್ಷಗಳಿಂದ ಬಂದ್ ಆಗಿದ್ದರಿಂದ ಗೋವಾದ ಕಬ್ಬು ಬೆಳೆಗಾರರು ಕರ್ನಾಟಕದ ವಿವಿಧ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳುಹಿಸುತ್ತಿದ್ದರು. ಇದೀಗ ಗೋವಾದಲ್ಲಿದ್ದ ಸಕ್ಕರೆ ಕಾರ್ಖಾನೆ ಮತ್ತೆ ಪುರಾರಂಭಗೊಳ್ಳಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಭರವಸೆ ನೀಡಿದ್ದಾರೆ.