ಸುದ್ದಿಕನ್ನಡ ವಾರ್ತೆ
Goa : ಗೋವಾ ರಾಜ್ಯ ಸರ್ಕಾರವು ಗೋವಾದ ಶಿರಗಾಂವನಲ್ಲಿರುವ ಲಯಿರಾಯಿ ದೇವಿಯ ವಾರ್ಷಿಕ ಉತ್ಸವಕ್ಕೆ ರಾಜ್ಯ ಉತ್ಸವದ ಸ್ಥಾನ ಮಾನ ನೀಡುವುದಾಗಿ ಇತ್ತೀಚೆಗೆ ಘೋಷಿಸಿತ್ತು. ಆದರೆ ದೇವಾಲಯದ ಟ್ರಸ್ಟಿಗಳ ಸಾಮಾನ್ಯ ಸಭೆಯಲ್ಲಿ ಸರ್ಕಾರದ ಈ ಘೋಷಣೆಯನ್ನು ವಿರೋಧಿಸಲಾಗಿದೆ. ಸಭೆಯಲ್ಲಿ ಉಪಸ್ಥಿತರಿದ್ದ ದೇವಸ್ಥಾನದ ಮಹಾಜನರು ಈ ಪ್ರಸ್ತಾವವು ಸ್ವೀಕಾರಾರ್ಹವಲ್ಲ ಎಂದು ಘೋಷಿಸಿದೆ.

ಲಯಿರಾಯಿ ದೇವಸ್ಥಾನದ ನೂತನ ಅಧ್ಯಕ್ಷ ದೀನಾನಾಥ ಗಾಂವ್ಕರ್ ಮತ್ತು ಸಮೀತಿಯ ಎಲ್ಲ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ದೇವಸ್ಥಾನದ ಮಹಾಜನರ ಸಭೆಯಲ್ಲಿ 82 ಮಹಾಜನರು ಉಪಸ್ಥಿತರಿದ್ದರು. ಸಮೀತಿಯ ನೂತನ ಅಧ್ಯಕ್ಷ ದೀನಾನಾಥ ಗಾಂವ್ಕರ್, ಭಾಸ್ಕರ್ ಗಾಂವ್ಕರ್, ಅತೀಶ ಗಾಂವ್ಕರ್, ದಯಾನಂದ ಗಾಂವ್ಕರ್, ವಾಸು ಗಾಂವ್ಕರ್, ಮಹಾದೇವ ಗಾಂವ್ಕರ್, ಪ್ರಕಾಶ ಗಾಂವ್ಕರ್, ಸುಭಾಷ ಗಾಂವ್ಕರ್ ಸೇರಿದಂತೆ ಮಹಾಜನರು ಉಪಸ್ಥಿತರಿದ್ದರು.

ಶ್ರೀ ಲಯಿರಾಯಿ ದೇವಸ್ಥಾನವು ಮಹಾಜನಿ ದೇವಸ್ಥಾನವಾಗಿರುವುದರಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಮಹಾಜನಿ ಸಭೆಯಿಂದ ಅನುಮೋದನೆ ಪಡೆಯುವುದು ಖಡ್ಡಾಯವಾಗಿದೆ ಎಂದು ಅಧ್ಯಕ್ಷ ದೀನಾನಾಥ ಗಾಂವ್ಕರ್ ಹೇಳಿದರು. ಮಹಾಜನಿ ದೇವಸ್ಥಾನದಿಂದ ಮಹಾಜನರ ಅನುಮೋದನೆಯಿಲ್ಲದೆಯೇ ಯಾವುದೇ ಮುಂದಿನ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವಲ್ಲ ಎಂಬ ಸಲಹೆಯನ್ನು ಸರ್ಕಾರಕ್ಕೆ ನೀಡಲಾಗಿದೆ ಎಂದರು.
ನಮ್ಮ ಮಹಾಜನಿ ದೇವಸ್ಥಾನದ ಕುರಿತು ಸರ್ಕಾರ ನಿರ್ಧಾರ ತೆಗೆದುಕೊಳ್ಳುವಾಗ ದೇವಸ್ಥಾನದ ಮಹಾಜನರಿಂದ ಅನುಮೋದನೆ ಪಡೆದುಕೊಳ್ಳುವುದು ಅಗತ್ಯ. ಸರ್ಕಾರವು ದೇವಸ್ಥಾನದ ಉತ್ಸವವನ್ನು ರಾಜ್ಯ ಉತ್ಸವದ ಸ್ಥಾನ ಮಾನ ನೀಡುವುದಾಗಿ ಘೋಷಿಸಿದ್ದರೂ ಕೂಡ ಸರಿಯಾದ ಕಾರ್ಯ ವಿಧಾನವನ್ನು ಅನುಸರಿಸಿಲ್ಲ. ನಾವು ಇದನ್ನು ಸರ್ವಾನುಮತದಿಂದ ವಿರೋಧಿಸುತ್ತೇವೆ ಎಂದು ಅಧ್ಯಕ್ಷ ದೀನಾನಾಥ ಗಾಂವ್ಕರ್ ಹೇಳಿದರು.