ಚಿಕ್ಕೋಡಿ: ಕಳೆದ ಎರಡು ದಿನಗಳಿಂದ ನೆರೆಯ ಮಹಾರಾಷ್ಟ್ರ ಕೊಂಕಣ ಭಾಗ ಮತ್ತು ರಾಜ್ಯದ ಗಡಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು. ಕೃಷ್ಣಾ.ದೂಧಗಂಗಾ ಮತ್ತು ವೇಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿರುವ ಪರಿಣಾಮ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಕೆಳಹಂತದ ಆರು ಸೇತುವೆಗಳು ಸೋಮವಾರ ಜಲಾವೃತಗೊಂಡಿವೆ.
ಮಹಾರಾಷ್ಟ್ರ ಜಲಾನಯನ ಪ್ರದೇಶದಲ್ಲಿ ಸೋಮವಾರ ಭಾರಿ ಮಳೆ ಸುರಿಯಲಾರಂಬಿಸಿದೆ. ಮಹಾಬಳೇಶ್ವರ. ಕೋಯ್ನಾ. ರಾಧಾನಗರಿ. ನವಜಾ. ಕಾಳಮ್ಮವಾಡಿ ಜಲಾನಯನ ಪ್ರದೇಶದಲ್ಲಿ 150 ಕ್ಕೂ ಅಧಿಕ ಮಿಮೀ ಮಳೆ ಸುರಿದಿದೆ. ಇದರಿಂದ ಮೂರು ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರಲಾರಂಭಿಸಿದೆ.
ದೂಧಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಚಿಕ್ಕೋಡಿ ತಾಲೂಕಿನ ಮಲಿಕವಾಡ- ದತ್ತವಾಡ. ನಿಪ್ಪಾಣಿ ತಾಲೂಕಿನ ಕಾರದಗಾ- ಭೋಜ. ಭೋಜವಾಡಿ- ಕುನ್ನೂರ. ವೇಧಗಂಗಾ ನದಿಯ ಜತ್ರಾಟ- ಭೀವಸಿ. ಬಾರವಾಡ- ಕುನ್ನೂರ. ಅಕ್ಕೋಳ- ಸಿದ್ನಾಳ ಸೇತುವೆ ಮುಳುಗಡೆಗೊಂಡಿವೆ.
ಮಹಾರಾಷ್ಟ್ರ ರಾಜಾಪೂರ ಬ್ಯಾರೇಜ ಮೂಲಕ ಕೃಷ್ಣಾ ನದಿಗೆ 47 ಸಾವಿರ ಕ್ಯೂಸೆಕ್ ಮತ್ತು ದೂಧಗಂಗಾ ನದಿಗೆ 16 ಸಾವಿರ ಕ್ಯೂಸೆಕ್ ಒಟ್ಟು 64 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬಂದು ಆಲಮಟ್ಟಿಗೆ ಹೋಗುತ್ತಿದೆ.