ಪಣಜಿ(ಸಾಖಳಿ): ಅಲ್ಪ ವಿರಾಮದ ನಂತರ ಗೋವಾ ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಶುಕ್ರವಾರ ತಡರಾತ್ರಿ ಮತ್ತು ಶನಿವಾರ ಬೆಳಗ್ಗೆಯಿಂದ ಸುರಿದ ಮಳೆಯಿಂದಾಗಿ ಸಾಖಳಿಯ ವಾಳವಂಟಿ ನದಿಪಾತ್ರದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಸಾಖಳಿ ಮಾರುಕಟ್ಟೆಯ ತಗ್ಗು ಪ್ರದೇಶಕ್ಕೆ ನದಿ ನೀರು ಬರುವುದರಿಂದ ಪಂಪ್ ಮೂಲಕ ನೀರು ಹರಿಸಲಾಗುತ್ತಿದೆ.

ಶನಿವಾರ ಬೆಳಿಗ್ಗೆಯಿಂದ ಗೋವಾ ರಾಜ್ಯಾದ್ಯಂತ ನಿರಂತರ ಮಳೆಯಾಗಿದೆ. ಕೆಲವು ತಗ್ಗು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರ ನಿಧಾನವಾಗಿತ್ತು. ಉದ್ಯೋಗಸ್ಥರು ಬೆಳಿಗ್ಗೆ ಕೆಲಸಕ್ಕೆ ಮನೆಯಿಂದ ಹೊರಡುವಾಗ ಸ್ವಲ್ಪ ತೊಂದರೆ ಅನುಭವಿಸಿದರು. ಆದರೆ ಸತತ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಾಖಳಿ ಮತ್ತು ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ವಾಳವಂಟಿ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ.

ಮಧ್ಯಾಹ್ನದ ಹೊತ್ತಿಗೆ, ವಾಳವಂಟಿ ನದಿಯ ಮಟ್ಟವು 3.5 ಮೀಟರ್ ತಲುಪಿತು. ಮಾರ್ಕೆಟ್ ಚರಂಡಿಯಲ್ಲಿ ನೀರಿನ ಮಟ್ಟ 3.9 ಮೀಟರ್ ತಲುಪಿದ್ದರಿಂದ ಅಲ್ಲಿನ ಪಂಪಿಂಗ್ ಸ್ಟೇಷನ್ ನಿಂದ ಪಂಪಿಂಗ್ ಕಾರ್ಯ ಆರಂಭಿಸಲಾಯಿತು. ಮಧ್ಯಾಹ್ನ, ನದಿಯಲ್ಲಿ ಉಬ್ಬರವಿಳಿತದ ಕಾರಣ ವಾಳವಂಟಿ ನದಿಯ ಮಟ್ಟವು ವೇಗವಾಗಿ ಏರಿತು. ಆದರೆ ಸ್ವಲ್ಪ ಸಮಯದ ನಂತರ ನೀರು ಕಡಿಮೆಯಾಗತೊಡಗಿತು. ಸಂಜೆ ವೇಳೆಗೆ ಮಳೆಯ ಅಬ್ಬರ ಸ್ವಲ್ಪ ಮಟ್ಟಿಗೆ ತಗ್ಗಿತ್ತು. ಹೀಗಾಗಿ ನದಿ ಮಟ್ಟ ನಿಯಂತ್ರಣಕ್ಕೆ ಬಂದಿದೆ. ಜಲಸಂಪನ್ಮೂಲ ಇಲಾಖೆಯ ಎಂಜಿನಿಯರ್‍ಗಳು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದರು.