ಪಣಜಿ: ಕಳೆದ ಅನೇಕ ವರ್ಷಗಳಿಂದ ಗೋವಾಕ್ಕೆ ಪ್ರತಿದಿನ ಬರುವ ಹಲವು ಕೆಎಸ್‍ಆರ್‍ಟಿಸಿ ಬಸ್ ಬಂದ್ ಆಗಿದೆ. ಈ ಕುರಿತಂತೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣಕುಮಾರ್ ಶೆಟ್ಟಿ ಬಣ ಸಂಘಟನೆ ಹೋರಾಟ ನಡೆಸುತ್ತ ಬಂದಿದ್ದು, ಇದರ ಫಲವಾಗಿ ಇದೀಗ ಅಗಷ್ಟ 11 ರಿಂದ ಇಂಡಿ-ವಾಸ್ಕೊ, ತಾಳಿಕೋಟಿ-ವಾಸ್ಕೊ ಬಸ್ ಓಡಾಟ ಪುನರಾರಂಭಗೊಂಡಿರುವುದು ನಮ್ಮ ಹೋರಾಟದ ಫಲವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕರ್ ನುಡಿದರು.
ಭಾನುವಾರದಿಂದ ಪುನರಾರಂಭಗೊಂಡ ಇಂಡಿ-ವಾಸ್ಕೊ, ತಾಳಿಕೋಟಿ-ವಾಸ್ಕೊ ಬಸ್ ಓಡಾಟಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಗೋವಾ ಕರ್ನಾಟಕ ಮಾರ್ಗಕ್ಕೆ ಬಂದ್ ಆಗಿರುವ ವಿವಿಧ ಬಸ್‍ಗಳನ್ನು ಪುನರಾರಂಭಿಸಲು ಕರ್ನಾಟಕ ರಕ್ಷಣಾ ವೇದಿಕೆ ಗೋವಾ ರಾಜಧಾನಿ ಪಣಜಿಯಲ್ಲಿ 6 ತಾಸು ಬಸ್ ಓಡಾಟ ಬಂದ್ ಮಾಡಿತ್ತು. ಇಷ್ಟೇ ಅಲ್ಲದೆಯೇ ನಮ್ಮ ರಾಜ್ಯಾಧ್ಯಕ್ಷರಾದ ಪ್ರವೀಣಕುಮಾರ್ ಶೆಟ್ಟಿ ರವರ ನೇತೃತ್ವದಲ್ಲಿ ಸಚಿವ ರಾಮಲಿಂಗ ರೆಡ್ಡಿ ರವರನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು. ನಮ್ಮ ಹೋರಾಟದ ಫಲವಾಗಿ ಇದೀಗ ಎರಡು ಬಸ್‍ಗಳು ಪುನರಾರಂಭಗೊಂಡಿದೆ. ಇದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆಯು ಸಚಿವ ರಾಮಲಿಂಗ ರೆಡ್ಡಿ ಹಾಗೂ ರಕ್ಷಣ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣಕುಮಾರ್ ಶೆಟ್ಟಿ ರವರಿಗೆ ಧನ್ಯವಾದ ಸಲ್ಲಿಸುತ್ತೇವೆ. ಮುಂಬರುವ ದಿನಗಳಲ್ಲಿ ಇನ್ನುಳಿದ ಬಸ್‍ಗಳ ಓಡಾಟವನ್ನು ಆರಂಭಿಸಲಾಗುವುದು. ಗೋವಾದ ಎಲ್ಲ ಕನ್ನಡಿಗರ ಸಹಕಾರದಲ್ಲಿ ಗೋವಾದಲ್ಲಿ ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಧ್ವನಿಯಾಗಿ ನಿಂತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕರ್ ನುಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವೀರಶೈವಲಿಂಗಾಯತ ಸಮಾಜದ ಜುವಾರಿ ನಗರ ಘಟಕದ ಅಧ್ಯಕ್ಷ ರುದ್ರಯ್ಯ ಹಿರೇಮಠ ಮಾತನಾಡಿ-ಗೋವಾಕ್ಕೆ ಬಂದ್ ಆಗಿದ್ದ ಬಸ್ ಓಡಾಟ ಪುನರಾರಂಭಗೊಂಡಿರುವುದು ಸಂತಸದ ಸಂಗತಿ. ಕರ್ನಾಟಕ ರಕ್ಷಣಾ ವೇದಿಕೆಯ ಸತತ ಹೋರಾಟದ ಫಲವಾಗಿ ಇಂದು ಈ ಎರಡು ಬಸ್ ಓಡಾಟ ಆರಂಭಗೊಂಡಿದೆ. ಮುಂಬರುವ ದಿನಗಳಲ್ಲಿ ಸಿಂಧಗಿ ಬಸ್ ಓಡಾಟ ಕೂಡ ಆರಂಭಗೊಳ್ಳಬೇಕು ಎಂಬ ಬೇಡಿಕೆಯಿದೆ. ಈ ಕುರಿತು ಕರ್ನಾಟಕ ಸರ್ಕಾರ ಗಮನಹರಿಸಿ ಈ ಬಸ್ ಓಡಾಟವನ್ನೂ ಪುನರಾರಂಭಿಸಬೇಕು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯ ಕಾರ್ಯದರ್ಶಿ ಶಿವಾನಂದ ಮಸಬಿನಾಳ, ರಾಜ್ಯ ಖಜಾಂಚಿ ವೈ.ಎಸ್.ಬಿರಾದಾರ್, ಮಾಧ್ಯಮ ಸಂಚಾಲಕ ರಮೇಶ್ ಮಾದರ್, ಯುವ ಘಟಕದ ಅಧ್ಯಕ್ಷ ಮಹೇಶ್ ಛಲವಾದಿ, ಶಿವಶರಣ ಹಡಪದ ಸಮಾಜದ ಅಧ್ಯಕ್ಷ ಮಹೇಶ್ ಹಡಪದ, ಕರವೇ ಸಡಾ ನಗರ ಘಟಕದ ಅಧ್ಯಕ್ಷ ಚಾಂದ್ ಸಾಬ್ ನದಾಫ್, ಉಪಾಧ್ಯಕ್ಷ ಶಿವು ತಲ್ವಾರ್, ಕರವೇ ವಾಸ್ಕೊ ಘಟಕದ ಅಧ್ಯಕ್ಷ ಸಂಗಮೇಶ ಹಡಪದ, ಕರಿಯಪ್ಪ, ಕರವೇ ಮಹಿಳಾ ಘಟಕದ ಮುಖಂಡರಾದ ಪಾರ್ವತಿ ಛಲವಾದಿ ಮತ್ತಿತರರು ಉಪಸ್ಥಿತರದ್ದರು.