ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಸಂಚಾರ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ಕೊಕೆರೊ ಸರ್ಕಲ್ ನಿಂದ ಮಾಲ್ ದೆ ಗೋವಾ ವರೆಗಿನ ರಸ್ತೆಯನ್ನು ಅಗಷ್ಟ 24 ರಿಂದ 31 ಜನವರಿ 2026 ರ ವರೆಗೆ ಎಲ್ಲ ಪ್ರಕಾರದ ವಾಹನಗಳ ಓಡಾಟಕ್ಕೆ ಸಂಪೂರ್ಣವಾಗಿ ನಿಷೇಧ ಹೇರಲಾಗುತ್ತಿದೆ. ಈ ಕುರಿತಂತೆ ಲೋಕೋಪಯೋಗಿ ಇಲಾಖೆಯು ಮಾಹಿತಿ ನೀಡಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಓಡಾಟ ನಡೆಸುವ ಪ್ರವಾಸಿಗರು ಪರ್ಯಾಯ ಮಾರ್ಗವನ್ನು ಬಳಕೆ ಮಾಡಿಕೊಳ್ಳಬೇಕಾಗಿದೆ.

 

ಲೋಕೋಪಯೋಗಿ ಇಲಾಖೆಯಿಂದ ಲಭ್ಯವಾದ ಮಾಹಿತಿಯ ಅನುಸಾರ- ಪರ್ವರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 6ವೇ ಪ್ಲೈಓವರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಪ್ಲೈಓವರ್ ನ ದೊಡ್ಡ ಭಾಗವನ್ನು ಅಳವಡಿಸಬೇಕಿದೆ. ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ರಾಷ್ಟ್ರೀಯ ಹೆದ್ದಾರಿಯ ಈ ಭಾಗದಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡುವ ಅನಿವಾರ್ಯತೆಯಿದೆ. ಇದರಿಂದಾಗಿ ಪರ್ವರಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಸುಮಾರು 5 ತಿಂಗಳು ಬಂದ್ ಆಗಲಿದೆ.

 

ಈ ಐದು ತಿಂಗಳ ಕಾಲಾವಧಿಯಲ್ಲಿ ಮಾಪ್ಸಾ-ಪಣಜಿಗೆ ತೆರಳುವ ವಾಹನಗಳು ಬಿ.ಬಿ ಬೋರಕರ್ ರಸ್ತೆ ಮಾರ್ಗವಾಗಿ ಪ್ರಯಾಣ ಬೆಳೆಸಬೇಕಿದೆ. ಪರ್ವರಿ ಭಾಗದ ಸ್ಥಳೀಯ ನಿವಾಸಿಗಳಿಗೆ ಬೈಕ್ ಮೂಲಕ ಓಡಾಟ ನಡೆಸಲು ಮಾತ್ರ ಅಲ್ಲಲ್ಲಿ ಸುರಕ್ಷಿತ ಪ್ರವೇಶ ನೀಡಲಾಗುವುದು ಎಂಬ ಮಾಹಿತಿ ಲಭಿಸಿದೆ. ಈ ನಿರ್ಣಯದಿಂದಾಗಿ ವಾಹನ ಸವಾರರಿಗೆ ಹೆಚ್ಚಿನ ತೊಂದರೆಯುಂಟಾಗಲಿದೆ.

ವಾಹನ ಸವಾರರ ಸುರಕ್ಷತೆ ಹಾಗೂ ಪ್ಲೈ ಓವರ್ ನಿರ್ಮಾಣ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಬೇಕೆನ್ನುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸ್ಪಷ್ಟಪಡಿಸಿದೆ. ಒಟ್ಟಾರೆ ಮುಂಬಯಿ ಭಾಗದಿಂದ ಮಂಗಳೂರು ಭಾಗಕ್ಕೆ ವಾಹನಗಳ ಮೂಲಕ ಪ್ರಯಾಣ ಬೆಳೆಸುವವರಿಗೆ ಗೋವಾದ ಪರ್ವರಿಯಲ್ಲಿ ಸಣಚಾರ ದಟ್ಟಣೆ ಸಮಸ್ಯೆ ಎದುರಾಗಲಿದೆ. ಇಷ್ಟೇ ಅಲ್ಲದೆಯೇ ಗೋವಾದ ಮಾಪ್ಸಾ-ಪಣಜಿ ಭಾಗಕ್ಕೆ ಪ್ರತಿದಿನ ಪ್ರಯಾಣ ಬೆಳೆಸುವವರಿಗೆ ಕೂಡ ಹೆಚ್ಚಿನ ತೊಂದರೆ ಎದುರಾಗಲಿದೆ.

 

ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ತೊಂದರೆ
ಗಣೇಶ ಚತುರ್ಥಿಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಪರ್ವರಿಯಲ್ಲಿ ರಸ್ತೆ ಬಂದ್ ಆಗಿರುವುದು ಹಬ್ಬದ ಸಂದರ್ಭದಲ್ಲಿ ಜನತೆ ಹೆಚ್ಚು ತೊಂದರೆ ಪಡುವಂತಾಗಲಿದೆ. ಈಗಾಗಲೇ ಪರ್ವರಿ ಭಾಗದಲ್ಲಿ ಭಾರಿ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ. ಆದರೆ ಈ ರಸ್ತೆ ಸಂಪೂರ್ಣ ಬಂದ್ ಆದರೆ ಪಣಜಿ-ಪರ್ವರಿ-ಮಾಪ್ಸಾ ಭಾಗಕ್ಕೆ ಓಡಾಟ ನಡೆಸುವವರು ಹೆಚ್ಚಿನ ತೊಂದರೆ ಅನುಭವಿಸುವಂತಾಗಲಿದೆ. ಇಷ್ಟೇ ಅಲ್ಲದೆಯೇ ಪಣಜಿಗೆ ಪ್ರತಿದಿನದ ಅಗತ್ಯತೆಗಳಿಗೆ ಮತ್ತು ಕೆಲಸಕ್ಕೆ ಬಂದು ಹೋಗುವವರು ಹೆಚ್ಚಿನ ತೊಂದರೆ ಅನುಭವಿಸುವಂತಾಗಲಿದೆ.