ಸುದ್ಧಿಕನ್ನಡ ವಾರ್ತೆ
ಪಣಜಿ:ಗೋವಾ ರಾಜ್ಯವು 400 ವರ್ಷಗಳಿಗೂ ಅಧಿಕ ಕಾಲ ಪೋರ್ಚುಗೀಸರ (Portuguese)ಆಳ್ವಿಕೆಯಲ್ಲಿಯೇ ಇತ್ತು. ಇಷ್ಟೊಂದು ಧೀರ್ಘ ಕಾಲದ ವರೆಗೆ ಪೋರ್ಚುಗೀಸರ ವಸಾಹತು ಪ್ರದೇಶವಾಗಿದ್ದ ಗೋವಾ ಸಹಜವಾಗಿಯೇ ಯೂರೋಪಿಯನ್ ಸಂಸ್ಕøತಿಯಿಂದ ಪ್ರಭಾವಿತವಾಗಿತ್ತು. ಗೋವಾದಲ್ಲಿ ಪೋರ್ಚುಗೀಸರ ಅಧಿಕಾರಾವಧಿಯಲ್ಲಿ ಗೋವಾದ ಬಾರ್ದೇಸ, ತಿಸ್ ವಾಡಿ, ಸಾಸಷ್ಠಿ, ಮತ್ತು ಮುರಗಾಂವ ಈ ನಾಲ್ಕು ತಾಲೂಕುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಧಾರ್ಮಿಕ ಮತಾಂತರಗಳು ನಡೆದವು. ಈ ಹಿಂದಿನಿಂದಲೂ ಕ್ರಿಶ್ಚಿಯನ್ ಸಂಖ್ಯೆ ಹೆಚ್ಚಿದ್ದರೂ ಗೋವಾದಲ್ಲಿ ಧಾರ್ಮಿಕ ಸಾಮರಸ್ಯ ಉಲೀದುಕೊಂಡಿದೆ. ಇದರಿಂದಾಗಿಯೇ ಪ್ರಪಂಚದಾದ್ಯಂತ ಜನರು ಗೋವಾ ರಾಜ್ಯಕ್ಕೆ ಆಕರ್ಷಿತರಾಗುತ್ತಾರೆ. ಗೋವಾದ ಆಹಾರ,ಸಂಸ್ಕøತಿ, ಆತಿಥ್ಯ, ಹಸಿರು ಪ್ರಕೃತಿ, ಬೆಳ್ಳಿಯ ಮರಳಿನ ಕಡಲ ತೀರಗಳು, ಪ್ರಸಿದ್ಧ ಪುರಾತನ ದೇವಾಲಯಗಳು, ಪೋರ್ಚುಗೀಸರ ಕಾಲದ ಮನೆಗಳು, ಬಿಳಿಯ ಚರ್ಚಗಳು ವಿಶೇಷವಾಗಿ ವಿದೇಶಿ ನಾಗರೀಕರನ್ನು ಆಕರ್ಷಿಸುತ್ತಲೇ ಇದೆ.

ಎಪ್ಪತ್ತರ ದಶಕದ ಆರಂಭದಲ್ಲಿ ಗೋವಾ ರಾಜ್ಯವು ಹಿಪ್ಪಿ ಸಂಸ್ಕøತಿಯನ್ನು (Hippie culture)ಅನುಭವಿಸಿತು. ಕರಾವಳಿ ಪ್ರದೇಶದಲ್ಲಿ ಪ್ಲೀ ಮಾರ್ಕೇಟ್ (Plea Market)  ಸಂಸ್ಕøತಿ ಬೇರೂರಿತು. ತಿನ್ನಿರಿ, ಕುಡಿಯಿರಿ ಮತ್ತು ಆನಂದಿಸಿ ಎಂಬ ಸಂದೇಶವನ್ನು ನೀಡುವಂತಹ ಕಾರ್ನಿವಲ್ ನಂತಹ ಹಬ್ಬಗಳು ವಿದೇಶಿಯ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಸೂರ್ಯಾಸ್ತ ಸಮಯದಲ್ಲಿನ ಪಣಜಿಯ ಮಾಂಡವಿ ನದಿಯಿಂದ ಮೀರಾಮಾರ್ ಬೀಚ್ ವರೆಗೆ ಬೋಟಿಂಗ್ ವಿಹಾರ ಅವುಗಳಲ್ಲಿನ ಸಂಗೀತ, ಆಹಾರ ಗೋವಾ ಮೋಡಿಯನ್ನು ಇನ್ನಷ್ಟು ಹೆಚ್ಚಿಸಿದೆ.

ಗೋವಾ ರಾಜ್ಯವು 1961 ರಲ್ಲಿ ಸ್ವಾತಂತ್ಯಗಳಿಸಿತು. ಗೋವಾ ರಾಜ್ಯವು ಭಾರತದ ಇತರ ಭಾಗಗಳಿಗಿಂತ 14 ವರ್ಷಗಳ ನಂತರ ಸ್ವಾತಂತ್ರ್ಯಗೊಂಡಿದೆ. 1961 ಕ್ಕಿಂತ ಮೊದಲು ಜನಿಸಿದ ಗೋವಾ ಜನರು ಅಧೀಕೃತವಾಗಿ ಪೋರ್ಚುಗೀಸ್ ನಾಗರೀಕರು..!ಇಂದಿಗೂ ಕೂಡ ವಾರ್ಷಿಕವಾಗಿ ಸರಾಸರಿ 5,000 ಜನರ ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿ ಪೋರ್ಚುಗೀಸ್ ಪೌರತ್ವವನ್ನು (Portuguese citizenship) ಪಡೆದುಕೊಳ್ಳುತ್ತಿದ್ದಾರೆ. ಉದ್ಯೋಗ ಮತ್ತು ವ್ಯವಹಾರಕ್ಕಾಗಿ ಯೂರೊಪಿನ ಎಲ್ಲಿಯಾದರೂ ಹೋಗಿ ನೆಲೆಸಲು ಅನುಕೂಲವಾಗಲಿದೆ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ಆದರೆ ಇಂತಹ ವಿಷಯವು ಭಾರತೀಯರಾದ ನಮಗೆ ಬೇಸರದ ಸಂಗತಿಯೇ ಸರಿ.
ಗೋವಾಕ್ಕೆ ಬಂದು ಇಲ್ಲಿಯೇ ಉಳಿಯುವ ವಿದೇಶಿ ಪ್ರಜೆಗಳು ಗೋವಾ ಸಂಸ್ಕøತಿಯೊಂದಿಗೆ ಯಾವುದೇ ಸಂಬಂಧವಿಲ್ಲದ ಹೊರಗಿನವರನ್ನು “ಬಾಯಲೆ ಲೋಕ್” ಎಂದು ಕರೆಯಲಾಗುತ್ತದೆ. ಅಕ್ರಮ ವಿದೇಶಿಗರನ್ನು ಪತ್ತೆಹಚ್ಚಲು ಮತ್ತು ಗಡಿಪಾರು ಮಾಡಲು ಗೋವಾ ಪೋಲಿಸರು ಆಪರೇಶನ್ ಪ್ಲಾಶ್ ಔಟ್ ಪ್ರಾರಂಭಿಸಿದ್ದಾರೆ. ಪ್ರಸಕ್ತ ವರ್ಷದ ಜೂನ್ ವರೆಗೆ ಗೋವಾದಲ್ಲಿ ಇಂತಹ 77 ಜನ ವಿದೇಶಿಗರನ್ನು ಪತ್ತೆ ಹಚ್ಚಲಾಗಿದೆ. ರಷ್ಯಾ, ಬಾಂಗ್ಲಾದೇಶ, ಉಗಾಂಡಾ, ಉಕ್ರೇನ್, ಅರ್ಜೆಂಟೇನಾದಿಂದ ಬಂದ ಜನರು ಗೋವಾದಲ್ಲಿ ರಹಸ್ಯವಾಗಿ ಉಳಿದು ತಮ್ಮ ವೀಸಾ ಅವಧಿ ಮುಗಿದ ನಂತರವೂ ವಿವಿಧ ವ್ಯವಹಾರಗಳನ್ನು ಮಾಡುತ್ತಿದ್ದರು. ಇತ್ತೀಚೆಗಷ್ಟೆ ಇಂತಹ 45 ಜನ ವಿದೇಶಿಗರನ್ನು ಗೋವಾದಿಂದ ಗಡಿಪಾರು ಮಾಡಲಾಗಿದೆ.

ಕೆಲವು ವಿದೇಶಿ ಪ್ರಜೆಗಳು ಗೋವಾಕ್ಕೆ ಬಂದ ನಂತರ ಉದ್ದೇಶಪೂರ್ವಕವಾಗಿ ತಮ್ಮ ಪಾಸ್ ಪೋರ್ಟಗಳನ್ನು ಸುಟ್ಟುಹಾಕುತ್ತಾರೆ ಎಂಬ ಮಾಹಿತಿಯೂ ಇದೆ. ಇಂತಹ ದಾಖಲಾತಿ ಇಲ್ಲದ ವಿದೇಶಿಗರಿಗೆ ಮನೆ ಬಾಡಿಗೆಗೆ ನೀಡುವವರ ವಿರುದ್ಧ ಪೋಲಿಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಗೋವಾದಲ್ಲಿ ಅಕ್ರಮವಾಗಿ ಉಳಿದಿರುವ ವಿದೇಶಿಗರನ್ನು ಪತ್ತೆ ಹಚ್ಚುವ ಕಾರ್ಯ ಕೂಡ ಪೋಲಿಸರು ಕೈಗೆತ್ತಿಕೊಂಡಿದ್ದಾರೆ.

ಗೋವಾದಲ್ಲಿ ಕೆಲವು ವಿದೇಶಿಗರು ರೆಸ್ಟೊರೆಂಟ್ ಮಾಲೀಕರಾಗಿದ್ದಾರೆ. ಈ ವಿದೇಶಿಗರು ಗೋವಾದವರ ಹೆಸರಿನಲ್ಲಿ ರೆಸ್ಟೊರೆಂಟ್ ಉಪಗುತ್ತಿಗೆ ಪಡೆದುಕೊಳ್ಳುತ್ತಾರೆ. ರೆಲವು ರಷ್ಯನ್ ರು ಗೋವಾದಲ್ಲಿ ಟ್ಯಾಕ್ಸಿ ವ್ಯವಹಾರವನ್ನು ಕೂಡ ನಡೆಸುತ್ತಿದ್ದಾರೆ. ಕೆಲವು ವಿದೇಶಿಗರು ಗೋವಾದಲ್ಲಿ ಯೋಗ ಬೋಧಕರಾಗಿದ್ದಾರೆ. ಗೋವಾ ಪ್ರವಾಸೋದ್ಯವನ್ನು ವಿದೇಶಿಗರು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಗೋವಾದಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಆಪರೇಶನ್ ಪ್ಲಾಶ್ ಓಟ್ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ. ಇದು ಎಷ್ಟು ಕಟ್ಟುನಿಟ್ಟಾಗಿ ನಡೆದು ಅಕ್ರಮ ತಡೆಯಲು ಸಾಧ್ಯವಾಗಲಿದೆ..? ಎಂಬುದನ್ನು ಕಾದು ನೋಡಬೇಕಾಗಿದೆ.