ಸುದ್ಧಿಕನ್ನಡ ವಾರ್ತೆ
ಗೋವಾಕ್ಕೆ ಬಂದ ಪ್ರವಾಸಿಗರು ಗೋವಾದಲ್ಲಿ ಬಯಲಿನಲ್ಲಿ ಆಹಾರ ಬೇಯಿಸಿದರೆ 5000 ದಿಂದ 1 ಲಕ್ಷ ರೂ ಗಳ ವರೆಗೆ ದಂಡ ತೆರಬೇಕಾಗಲಿದೆ. ಇಷ್ಟೇ ಅಲ್ಲದೆಯೇ ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಿದರೆ, ಬೀಚ್ ನಲ್ಲಿ ವಾಹನ ಚಲಾಯಿಸಿದರೆ ಇದೇ ರೀತಿಯ ದಂಡ ಅನ್ವಯವಾಗಲಿದೆ. ಈ ಕುರಿತು ಗೋವಾ ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ಪ್ರವಾಸಿಗರ ಮೇಲೆ ವಿವಿಧ ವಸ್ತುಗಳನ್ನು ಖರೀದಿಸುವಂತೆ ಒತ್ತಾಯಿಸುವ ಬೀದಿಬದಿಯ ಮಾರಾಟಗಾರರೂ ಕಠಿಣ ದಂಡಕ್ಕೆ ಒಳಗಾಗಲಿದ್ದಾರೆ.
ಗೋವಾದ ಕಡಲತೀರಗಳು ಮತ್ತು ಇತರ ಪ್ರವಾಸಿ ತಾಣಗಳಲ್ಲಿ ಸರಕುಗಳನ್ನು ಖರೀದಿಸಲು ಪ್ರವಾಸಿಗರ ಮೇಲೆ ಒತ್ತಡ ಹೇರುವುದು ಸೇರಿದಂತೆ ವಿವಿಧ ಸೇವೆಗಳಿಗೆ ಟಿಕೆಟ್ ಖರೀದಿಸಲು ಒತ್ತಾಯಿಸುವ ಪ್ರವಾಸಿಗರಿಗೆ 5,000 ರಿಂದ 1 ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ. ಈ ಮೊದಲು, ದಂಡವು 50,000 ರೂ.ಗಳವರೆಗೆ ಇತ್ತು. ಗೋವಾ ಪ್ರವಾಸಿ ಸ್ಥಳಗಳ ರಕ್ಷಣೆ ಮತ್ತು ತಿದ್ದುಪಡಿ ಮಸೂದೆ 2025 ಅನ್ನು ಚರ್ಚೆಯ ನಂತರ ಗೋವಾ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ಗೋವಾ ರಾಜ್ಯ ಪ್ರವಾಸೋದ್ಯಮ ಸಚಿವ ರೋಹನ್ ಖಂವಟೆ ಮಸೂದೆಯನ್ನು ಚರ್ಚೆಗೆ ಮಂಡಿಸಿ ಅಂಗೀಕರಿಸಿದರು. ಶಾಸಕ ದಾಜಿ ಸಾಲ್ಕರ್ ಮತ್ತು ಕಾರ್ಲೋಸ್ ಫೆರೇರಾ ತಿದ್ದುಪಡಿಗಳನ್ನು ಸೂಚಿಸಿದರು. ಅಕ್ರಮ ಟಿಕೆಟ್‍ಗಳನ್ನು ಗೋವಾ ಬೀಚ್‍ನಲ್ಲಿ ದಲ್ಲಾಳಿಗಳಿಂದ ಮಾರಾಟ ಮಾಡಲಾಗುತ್ತದೆ. ವಿವಿಧ ವಸ್ತುಗಳ ಮಾರಾಟಗಾರರು ಸರಕುಗಳನ್ನು ಖರೀದಿಸಲು ಜನರ ಮೇಲೆ ಒತ್ತಡ ಹೇರುತ್ತಾರೆ. ಈಗ ಈ ರೀತಿಯ ಕೃತ್ಯಗಳಿಗೆ ಕಠಿಣ ದಂಡ ವಿಧಿಸಲು ತಿದ್ಧುಪಡಿಯನ್ನು ಅಂಗೀಕರಿಸಲಾಯಿತು.
ಗೋವಾಕ್ಕೆ ಬಂದ ಪ್ರವಾಸಿಗರು ಬಯಲಿನಲ್ಲಿ ಆಹಾರವನ್ನು ಬೇಯಿಸುವುದು, ಮದ್ಯ ಸೇವಿಸಿದ ನಂತರ ಬಾಟಲಿಗಳನ್ನು ಎಸೆಯುವುದು ಮತ್ತು ಬೀಚ್‍ನಲ್ಲಿ ವಾಹನ ಚಲಾಯಿಸುವುದಕ್ಕೂ ದಂಡ ವಿಧಿಸಲಾಗುತ್ತದೆ. ದಂಡವನ್ನು 5,000 ರೂ.ಗಳಿಂದ 1 ಲಕ್ಷ ರೂ.ಗಳಿಗೆ ಹೆಚ್ಚಿಸಲು ಸೆಕ್ಷನ್ 10 ರಲ್ಲಿ ತಿದ್ದುಪಡಿ ಇದೆ. ದಂಡದ ಮೊತ್ತವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ದಂಡವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಶೇಕಡಾ 10 ರಷ್ಟು ಹೆಚ್ಚಿಸಬಹುದು. ಇದಕ್ಕಾಗಿ ‘ಸೆಕ್ಷನ್ 10ಂ’ ಸೇರಿಸಲಾಗಿದೆ.
ಸದನದಲ್ಲಿ ಎರಡು ಮಸೂದೆಗಳನ್ನು ಮಂಡಿಸಲಾಗಿದೆ
ಗೋವಾದಲ್ಲಿ ತೆರೆದ ಸ್ಥಳದಲ್ಲಿ ಕಸ ಎಸೆಯುವುದಕ್ಕೆ 3 ಲಕ್ಷ ರೂ.ಗಳವರೆಗೆ ದಂಡ ವಿಧಿಸಲು ಅವಕಾಶ ನೀಡುವ ಗೋವಾ ಕಸ ನಿಯಂತ್ರಣ ತಿದ್ದುಪಡಿ ಮಸೂದೆಯನ್ನು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಸದನದಲ್ಲಿ ಮಂಡಿಸಿದರು. ‘ಗೋವಾ ಸಾರ್ವಜನಿಕ ವಿಶ್ವವಿದ್ಯಾಲಯಗಳ ಮಸೂದೆ 2025’ ಅನ್ನು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಮಂಡಿಸಿದರು. ಈ ಮಸೂದೆಯು ಕಾಲೇಜುಗಳ ಸಮೂಹಗಳನ್ನು ಸ್ಥಾಪಿಸುವ ನಿಬಂಧನೆಯನ್ನು ಒಳಗೊಂಡಿದೆ.